ಬೆಂಗಳೂರು,ಜು 23 (Daijiworld News/MSP): ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷನಾಯಕ ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಟಿ ನಡೆಸಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕೊರೊನಾ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಆರೋಪವನ್ನು ಮತ್ತೆ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ , "ರಾಜ್ಯದಲ್ಲಿ ಕೊರೊನಾ ಹಾವಳಿಗಿಂತ ಭ್ರಷ್ಟಾಚಾರವೇ ತಾಂಡವಾಡುತ್ತಿದೆ, ಇಷ್ಟೆಲ್ಲ ಖರ್ಚು ಮಾಡಿ ಏನು ಕಡಿದು ಕಟ್ಟೆ ಹಾಕ್ತಿದ್ದೀರಿ" ಎಂದು ಸರ್ಕಾರದ ವಿರುದ್ದಕಿಡಿಕಾರಿದ್ದಾರೆ.
ಅವ್ಯವಾಹರ ನಡೆದಿದೆ ಎಂದು ಒಂದು ತಿಂಗಳ ಹಿಂದೆ ಸಿಎಂ ಮತ್ತು ಅಧಿಕಾರಿಗಳಿಗೆ ನಾನು ಒಟ್ಟು 20 ಪತ್ರ ಬರೆದಿದ್ದೇನೆ. ಇದಕ್ಕೆ ಸಿಎಂ ಯಡಿಯೂರಪ್ಪ ದಾಖಲೆ ಕೇಳಿದ್ರೆ 24 ಗಂಟೆಯಲ್ಲಿ ಕೊಡುತ್ತೇನೆ ಎಂದು ಹೇಳಿ ಸುಮ್ಮನಾಗಿದ್ದಾರೆ. ಪ್ರಾಮಾಣಿಕತೆ ಇದ್ದರೆ ಇದುವರೆಗೆ ಬರೆದ ಪತ್ರಕ್ಕೆ ಉತ್ತರ ಕೊಡಬೇಕಾಗಿತ್ತು. ಆದರೆ ಇಲ್ಲಿ ಸತ್ಯವನ್ನು ಅಡಗಿಸಲಾಗುತ್ತಿದೆ ಎಂದು ಹೇಳಿದ್ದಾರೆ
ಕೊವೀಡ್ ನಂತ ಸಂಕಷ್ಟದ ಸಮಯದಲ್ಲಿ ಜನರ ಜೀವ ಉಳಿಸಬೇಕಾಗಿದೆ .ಇದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ ಕೊವಿಡ್ ಹೆಸರಿನಲ್ಲಿ ಸರ್ಕಾರ ಲೂಟಿ ಮಾಡಲು ಹೊರಟಿದೆ. ಇದಕ್ಕೆ ನಾವು ಸಹಕಾರ ನೀಡಬೇಕಾ? ಮಾರುಕಟ್ಟೆ ದರಕ್ಕಿಂತ 2-3 ಪಟ್ಟು ಹೆಚ್ಚು ನೀಡಿ ಕೊರೊನಾ ವೈದ್ಯಕೀಯ ಪರಿಕರಗಳ ಖರೀದಿ ಮಾಡಿದ್ದಾರೆ. 2,000 ಕೋಟಿ ರೂಪಾಯಿ ಸಚಿವರು ಮತ್ತು ಅಧಿಕಾರಿಗಳ ಜೇಬಿಗೆ ಹೋಗಿದೆ ಎಂದು ನಾನು ನೇರವಾಗಿ ಆರೋಪ ಮಾಡಿದ್ದೇನೆ ಆದರೆ ಅದಕ್ಕೆ ಯಾಕೆ ಉತ್ತರಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರ ಲೂಟಿ ಮಾಡಲು ಹೊರಟಿದ್ದು ಇಷ್ಟೆಲ್ಲ ಖರ್ಚು ಮಾಡಿ ಏನು ಕಡಿದು ಕಟ್ಟೆ ಹಾಕ್ತಿದ್ದೀರಿ. ಈಗ ನಮ್ಮ ಬಳಿ ಕೋ-ಆಪರೇಟ್ ಮಾಡಿ ಕೋ-ಆಪರೇಟ್ ಮಾಡಿ ಎನ್ನುತ್ತಾರೆ. ಚುನಾಯಿತ ಸರ್ಕಾರ ಹೇಳುವಂತ ಹೇಳಿಕೆಯ ಇದು ಎಂದು ಸರ್ಕಾರವನ್ನ ಕಟುವಾಗಿ ಟೀಕಿಸಿದ್ದಾರೆ.