ಅಯೋಧ್ಯೆ, ಜು. 23 (DaijiworldNews/MB) : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಚಾಲನೆ ದೊರೆಯಲಿದೆ. ಈಗಾಗಲೇ ಎಲ್ಲಾ ಕಾರ್ಯಗಳನ್ನು ಆರಂಭ ಮಾಡಲಾಗಿದೆ. ಹಾಗೆಯೇ ಮಂದಿರದ ವಿನ್ಯಾಸದಲ್ಲೂ ಬದಲಾವಣೆಯನ್ನು ತರಲಾಗುತ್ತಿದೆ. ಈ ನಡುವೆ ದೇವಸ್ಥಾನದ ಎತ್ತರ ಮೊದಲ ವಿನ್ಯಾಸಕ್ಕಿಂತ 20 ಅಡಿ ಹೆಚ್ಚಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದೇವಾಲಯದ ಮುಖ್ಯ ವಾಸ್ತುಶಿಲ್ಪಿ ಸಿ.ಸೊಂಪುರ ಅವರ ಪುತ್ರ ಹಾಗೂ ವಾಸ್ತುಶಿಲ್ಪಿ ನಿಖಿಲ್ ಸೊಂಪುರ ಅವರು, ಮೊದಲು 141 ಅಡಿ ಎತ್ತರದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಿರ್ಣಯಿಸಲಾಗಿತ್ತು. ಈಗ ವಿನ್ಯಾಸದಲ್ಲಿ ಬದಲಾವಣೆಯಾಗಿದ್ದು 141 ಅಡಿಗಳಿಂದ 161 ಅಡಿಗಳಿಗೆ ಹೆಚ್ಚಿಸಲಾಗಿದೆ. 1988ರಲ್ಲಿ ರಾಮ ಮಂದಿರದ ಮೂಲ ವಿನ್ಯಾಸ ರೂಪಿಸಲಾಗಿದ್ದು ಈಗಾಗಲೇ 30 ವರ್ಷಗಳಾಗಿವೆ. ದೇವಾಲಯಕ್ಕೆ ಭಕ್ತರ ಭೇಟಿ ಹೆಚ್ಚಳವಾಗುವ ಸಾಧ್ಯತೆಗಳಿದ್ದು ಈ ನಿಟ್ಟಿನಲ್ಲಿ ದೇವಾಲಯದ ಗಾತ್ರದಲ್ಲಿ ಹೆಚ್ಚಳ ಮಾಡಲು ನಾವು ತೀರ್ಮಾನ ಕೈಗೊಂಡಿದ್ಧೇವೆ. ಮೂಲ ವಿನ್ಯಾಸದ ಆಧಾರದ ಮೇಲೆ ಕೆತ್ತಿದ ಎಲ್ಲಾ ಕಂಬಗಳನ್ನು ಹಾಗೂ ಕಲ್ಲುಗಳನ್ನು ದೇವಾಲಯ ನಿರ್ಮಾಣಕ್ಕೆ ಬಳಸಲಾಗುತ್ತದೆ. ಎರಡು ಮಂಟಪ ಮಾತ್ರ ಹೊಸದಾಗಿ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳು ಸ್ಥಳಕ್ಕೆ ತಲುಪಿದ್ದು ಪ್ರಧಾನಿ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಿದ ಬಳಿಕ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಸುಮಾರು 3.5 ವರ್ಷಗಳ ಅವಧಿ ಈ ದೇವಾಲಯ ನಿರ್ಮಾಣಕ್ಕೆ ಬೇಕಾಗಬಹುದು ಎಂದು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಚಾಲನೆ ದೊರೆಯಲಿದ್ದು ಆಗಸ್ಟ್ 3ರಿಂದಲೇ ಭೂಮಿ ಪೂಜೆಯ ಆಚರಣೆಗಳು ಆರಂಭವಾಗಲಿದೆ ಎಂದು ಹೇಳಲಾಗಿದೆ. ಹಾಗೆಯೇ ಈ ಸಂದರ್ಭದಲ್ಲಿ ಸುಮಾರು 40 ಕೆಜಿ ಬೆಳ್ಳಿ ಇಟ್ಟಿಗೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇರಿಸುವ ಮೂಲಕ ಕಾಮಗಾರಿ ಆರಂಭವಾಗಲಿದೆ.