ಮುಂಬೈ, ಜು 23 (Daijiworld News/MSP): ಪುಣೆ ಮತ್ತು ನಾಸಿಕ್ ನಲ್ಲಿ ಕೋವಿಡ್ -19 ಲಾಕ್ಡೌನ್ ದೃಷ್ಟಿಯಿಂದ ಮದ್ಯವನ್ನು ಮನೆಗೆ ವಿತರಿಸಲು ಅನುಮತಿ ನೀಡಲಾಗಿದ್ದು , ಇದರ ವಿರುದ್ಧ ಮಹಾರಾಷ್ಟ್ರ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತುರ್ತು ವಿಚಾರಣೆ ನಡೆಸಲು ನಿರಾಕರಿಸಿ ಅರ್ಜಿದಾರರಿಗೆ ಛೀಮಾರಿ ಹಾಕಿದೆ.
"ಈ ಅರ್ಜಿಯನ್ನು ಪುರಸ್ಕರಿಸಲು ನಮಗೆ ಯಾವುದೇ ಆಸಕ್ತಿ ಇಲ್ಲ. ಮದ್ಯವು ಅತ್ಯಗತ್ಯ ವಿಚಾರವಲ್ಲ, ನಾವು ಯಾಕೆ ತುರ್ತು ಆದೇಶ ನೀಡಬೇಕು" ಎಂದು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಸುಪ್ರೀಂ ಕೋರ್ಟ್ನ ನ್ಯಾಯಪೀಠವು ಅರ್ಜಿಯನ್ನು ವಿಚಾರಣೆಗೆ ನಿರಾಕರಿಸಿದ ಸಂದರ್ಭದಲ್ಲಿ ಹೇಳಿದರು.
ಪುಣೆ ಮತ್ತು ನಾಸಿಕ್ ನಲ್ಲಿ ಮನೆಗೆ ಮದ್ಯ ವಿತರಣೆಯ ಮಾಡುವ ವಿರುದ್ದ ಅರ್ಜಿದಾರ ಮಹಾರಾಷ್ಟ್ರ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್, ಸುಪ್ರೀಂ ಕೋರ್ಟ್ ಗೆ ತಿರ್ತು ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಿತ್ತು.
ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಮಹಾರಾಷ್ಟ್ರ ಸರ್ಕಾರದ ಅಬಕಾರಿ ಇಲಾಖೆಯು ಈ ವರ್ಷದ ಮೇ ತಿಂಗಳಲ್ಲಿ ಕೆಲವು ಮಾರ್ಗಸೂಚಿಗಳು ಮತ್ತು ಮುನ್ನೆಚ್ಚರಿಕೆಗಳೊಂದಿಗೆ ಮದ್ಯವನ್ನು ಹೋಂ ಡೆಲಿವರಿ ಮಾಡಲು ಅನುಮತಿ ನೀಡಿತ್ತು.