ನವದೆಹಲಿ, ಜು 23 (DaijiworldNews/PY): ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ವಿವಾದವನ್ನು ಗುರುವಾರ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಸಭಾಧ್ಯಕ್ಷರು ಸರ್ಕಾರದಲ್ಲಿ ಯಾವುದೇ ರೀತಿಯಾದ ಬೆಳವಣಿಗೆಯಾದರೆ ತಟಸ್ಥವಾಗಿರಬೇಕು. ಭಿನ್ನಮತದ ಧ್ವನಿಯನ್ನು ಪ್ರಜಾಪ್ರಭುತ್ವದಲ್ಲಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದೆ.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಗುರುವಾರ ಸುಪ್ರೀಂಕೋರ್ಟ್ನಲ್ಲಿ ರಾಜಸ್ತಾನ ಸ್ಪೀಕರ್ ಸಿ.ಪಿ.ಜೋಶಿ ಅವರ ಪರವಾಗಿ ವಾದ ಮಂಡಿಸಿದ್ದು, ಸಿಎಲ್ಪಿ ಸಭೆಗೆ 19 ಶಾಸಕರು ಭಾಗವಹಿಸಿಲ್ಲ. ಸರ್ಕಾರವನ್ನು ಉರುಳಿಸುವ ಸಲುವಾಗಿ ಪಿತೂರಿ ನಡೆಸಿದ್ದಾರೆ ಎಂದು ತಿಳಿಸಿದರು.
ಕಪಿಲ್ ಸಿಬಲ್ ಅವರ ಮಾತಿಗೆ ಪ್ರತಿಕ್ರಿಯಿಸಿದ ನ್ಯಾ. ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಭಿನ್ನಮತದ ಧ್ವನಿಯನ್ನು ಪ್ರಜಾಪ್ರಭುತ್ವದಲ್ಲಿ ಹತ್ತಿಕ್ಕಲು ಸಾಧ್ಯವಿಲ್ಲ. ಹಾಗಾಗಿ ಶಾಸಕರ ಅನರ್ಹತೆ ಬಗ್ಗೆ ಕೋರ್ಟ್ ಪರಿಶೀಲನೆ ಮಾಡಲಿದೆ ಎಂದಿದೆ.
ಸ್ಪೀಕರ್ ಅವರು ಈ ವಿಚಾರವಾಗಿ ತೀರ್ಮಾನ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ಹೈಕೋರ್ಟ್ ಆದೇಶವನ್ನು ನೀಡಲು ಸಾಧ್ಯವಿಲ್ಲ. ಈ ಬಗ್ಗೆ ನಮ್ಮ ಆತಂಕ ಪೂರ್ತಿಯಾಗಿ ಸಾಂವಿಧಾನಿಕವಾಗಿದೆ ಎಂದು ನ್ಯಾಯಾಲಯದ ಪ್ರಶ್ನೆಗೆ ವಕೀಲ ಕಪಿಲ್ ಸಿಬಲ್ ಅವರು ಉತ್ತರಿಸಿದರು.
ಬಂಡಾಯ ಶಾಸಕರು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಹಾಜರಾಗಿಲ್ಲ ಎನ್ನುವ ಕಾರಣದಿಂದ ಶಾಸಕರಿಗೆ ಸ್ಪೀಕರ್ ಅನರ್ಹತೆ ನೋಟಿಸ್ ಅನ್ನು ಕೊಡಬಹುದೇ? ಹಾಗಾಗಿ ಅವರು ಪಕ್ಷ ವಿರೋಧಿಯಾಗಿದ್ದಾರೆ ಎನ್ನಲು ಸಾಧ್ಯವೇ ಎಂದು ಕಪಿಲ್ ಸಿಬಲ್ ಅವರನ್ನು ನ್ಯಾಯಪೀಠ ಕೇಳಿದೆ.
ಸಚಿನ್ ಪೈಲಟ್ ಸೇರಿದಂತೆ 18 ಬಂಡಾಯ ಶಾಸಕರು ಕಾಂಗ್ರೆಸ್ನ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲಿಲ್ಲ ಎನ್ನು ಕಾರಣ ನೀಡಿ ಸ್ಪೀಕರ್ ಅವರು ಅನರ್ಹತೆಗೊಳಿಸಿದ್ದು, ಇದನ್ನು ಪ್ರಶ್ನೆ ಮಾಡಿದ್ದ 19 ಶಾಸಕರು ರಾಜಸ್ತಾನ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ನಿನ್ನೆ ಸಿ.ಪಿ ಜೋಶಿ ಅವರು, ಹೈಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಂಡು ತೀರ್ಪು ನೀಡಲು ತಡ ಮಾಡುತ್ತಿದ್ದು, ಸಾಂವಿಧಾನಿಕವಾಗಿ ಇದು ತಪ್ಪು ಎಂದಿದ್ದರು.