ನವದೆಹಲಿ, ಜು 23 (DaijiworldNews/PY): ವೈದ್ಯಕೀಯ ಉಪಕರಣ ಖರೀದಿ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರು, ಕೊರೊನಾ ಮಹಾಮಾರಿಯ ಸಂಕಷ್ಟದಲ್ಲಿ ಸತ್ಯಾಂಶವಿಲ್ಲದ ದಾಖಲೆಗಳ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುವ ನಿಮ್ಮ ಆಧಾರ ರಹಿತ ಆರೋಪಗಳನ್ನು ರಾಜ್ಯದ ಜನ ನಂಬುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯ ನೀಡಿದ ಅವರು, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ ಅಂತ ನಾವು ದಾಖಲೆಗಳನ್ನು ಬಿಡುಗಡೆ ಮಾಡಿದರೂ ಮಾನ್ಯ ವಿರೋಧ ಪಕ್ಷದ ನಾಯಕರು ಆಧಾರ ರಹಿತವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. 'ನಿಜ ಸತ್ಯದ ಅರಿವಾಗುವ ತನಕ ನೀವು ತಿಳಿದಿರುವ ಸತ್ಯವೆಲ್ಲವೂ ಕಾಲ್ಪನೀಕʼ ಎಂದಿದ್ದಾರೆ.
ಕೊರೊನಾ ಮಹಾಮಾರಿಯ ಸಂಕಷ್ಟದಲ್ಲಿ ಸತ್ಯಾಂಶವಿಲ್ಲದ ದಾಖಲೆಗಳ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುವ ನಿಮ್ಮ ಆಧಾರ ರಹಿತ ಆರೋಪಗಳನ್ನು ರಾಜ್ಯದ ಜನ ನಂಬುವುದಿಲ್ಲ. ಜನರಿಗೆ ಸತ್ಯಯಾವುದು ಸುಳ್ಳು ಯಾವುದು ಗೊತ್ತಿದೆ. ಯಾರೂ ಬೇಕಾದರೂ ಲೆಕ್ಕ ಕೇಳಿದರೂ ನಮ್ಮ ಬಳಿ ಸರಿಯಾದ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.
ಜಗತ್ತಿನಲ್ಲಿ ನಾನೇ ಬಲ್ಲವನೆಂದು. ನಾನೇ ಸತ್ಯವಂತನೆಂದುಕೊಂಡರೆ ಅಂಥವರು ಎಲ್ಲರಿಗಿಂತಲೂ ಕೀಳಾಗುತ್ತಾರೆ. ಸೇವಾ ಕಾರ್ಯದಲ್ಲಿ ಪ್ರೀತಿ ಕರುಣೆ ಇರಬೇಕೆ ಹೊರತು ಪ್ರತಿಷ್ಠೆ ಕೀರ್ತಿ ಮತ್ತು ಕಾಮನೆಗಳಲ್ಲ. ಅಸೂಯೆ ಅಧಃಪತನಕ್ಕೆ ನಾಂದಿ. ಸತ್ಯ ಯಾವತ್ತು ಧಾನ್ಯವಿದ್ದಂತೆ, ಸುಳ್ಳು ತೌಡಿದ್ದಂತೆ. ಜನರಿಗೆ ಗಟ್ಟಿ, ಜೊಳ್ಳು ಯಾವುದು ಎಂದು ಗೊತ್ತಿದೆ ಎಂದಿದ್ದಾರೆ.
ಇಷ್ಟು ವರ್ಷದ ರಾಜಕೀಯ ಅನುಭವದಲ್ಲಿ ಪ್ರಸ್ತಾವನೆಗೂ ಮಂಜೂರಾತಿಗೂ ವ್ಯತ್ಯಾಸ ಗೊತ್ತಿಲ್ಲ ಎಂದು ಕಾಣುತ್ತದೆ. ಅವರು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 815 ಕೋಟಿ ರೂ. ವೆಚ್ಚದಲ್ಲಿ ಉಪಕರಣ ಖರೀದಿಯಾಗಿದೆ ಎಂದಿದ್ದಾರೆ. ಆದರೆ ಖರ್ಚು ಕೇವಲ 33 ಕೋಟಿ ರೂ ಅಷ್ಟು. ಪ್ರಸ್ತಾವನೆ ಖರ್ಚಿನ ಲೆಕ್ಕ ಹೇಗೆ ಆಗುತ್ತದೆ? ಎಂದು ಕೇಳಿದ್ದಾರೆ.