ಬೆಂಗಳೂರು, ಜು. 23 (DaijiworldNews/MB) : ಸರ್ಕಾರ ಹೆಣದ ಮೇಲೆ ಹಣ ಮಾಡಲು ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊರೊನಾ ವಿಚಾರದಲ್ಲಿ ಸರ್ಕಾರ ನಮ್ಮ ಬಳಿ ಸಹಕಾರ ಕೇಳಿದ್ದಾರೆ. ನಾವು ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ದೇವೆ. ಆದರೆ ಸರ್ಕಾರ ಹೆಣದ ಮೇಲೆ ಹಣ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಸರ್ಕಾರಕ್ಕೆ ಯಾವುದೇ ಒಂದು ಗುರಿ ಇಲ್ಲ. ಕೇವಲ ಭ್ರಷ್ಟಾಚಾರಕ್ಕಾಗಿ ಸರ್ಕಾರವಾಗಿ ಬಿಟ್ಟಿದೆ. ಬಿಜೆಪಿ ಸರ್ಕಾರದವರು ಕೊರೊನಾ ಸೋಂಕು ಹರಡಿಸುವುದರ ಜತೆಗೆ ಭ್ರಷ್ಟಾಚಾರದ ಸೋಂಕನ್ನು ಕೂಡಾ ಹಂಚಿದ್ದಾರೆ. ಯಾವುದೇ ಭ್ರಷ್ಟಾಚಾರ ಮಾಡಲಿಲ್ಲ ಎಂದಾದರೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆ ಮಾಡಲು ಹಾಗೂ ತಪಾಸಣೆ ನಡೆಸಲು ಅವಕಾಶ ನೀಡಿ. ಅದಕ್ಕೆ ನಿಮ್ಮ ಮನಸ್ಸು ಒಪ್ಪುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಸರ್ಕಾರ 21 ದಿನದಲ್ಲಿ ಕೊರೊನಾ ಗೆಲ್ಲುವುದು ಎಂದು ಹೇಳಿದ್ದು ಈಗ 121 ದಿನ ಆಗಿದೆ. ಇದನ್ನು ಆಧುನಿಕ ಭಾರತದ ಕೌರವರ ಲೂಟಿ ಎಂದು ಕರೆಯಬೇಕೇ ಎಂದು ಪ್ರಶ್ನಿಸಿದ ಅವರು, ಭಾರತದಲ್ಲೇ ಕರ್ನಾಟಕ ಕಪ್ಪು ಚುಕ್ಕೆಯಾಗಿದೆ ಎಂದು ಹೇಳಿದರು.
ಆಹಾರದ ಕಿಟ್ ಮೇಲೆ ಹೆಸರು ಹಾಕಿ ಕೊಟ್ಟಿದ್ದಾರೆ. ಕಾರ್ಮಿಕರಿಗೆ 1200 ರೂ ಕೊಟ್ಟು ಊಟ ನೀಡಿದ್ದಾರೆ. ಅದನ್ನು ಯಾವ ಫೈವ್ ಸ್ಟಾರ್ ಹೊಟೇಲ್ನಿಂದ ತರಿಸಿದ್ದೀರಿ ಎಂದು ಲೇವಡಿ ಮಾಡಿದ ಅವರು ಸರ್ಕಾರ ಕಾರ್ಮಿಕರನ್ನು ಕೀಳಾಗಿ ನೋಡುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ಸಂಬಳ ನೀಡಲು ಸರ್ಕಾರಕ್ಕೆ ಆಗುತ್ತಿಲ್ಲ. ಕನಿಷ್ಟ ಮಟ್ಟ ಅವರನ್ನು ಕರೆದು ಮಾತನಾಡಿಸಲು ಕೂಡಾ ಸರ್ಕಾರದಿಂದ ಸಾಧ್ಯವಾಗಿಲ್ಲ. ಇತ್ತ ಪೌರ ಕಾರ್ಮಿಕರಿಗೂ ಯಾವ ರಕ್ಷಣೆಯೂ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಒಂಬತ್ತು ಜನ ಮಂತ್ರಿಗಳು ಸೇರಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು ಒರ್ವ ಮಂತ್ರಿಯೂ ಕೂಡಾ ಆಸ್ಪತ್ರೆಗೆ ಹೋಗಲಿಲ್ಲ. ಸೋಂಕಿತರಿಗೆ ಯಾವ ಧೈರ್ಯವನ್ನು ನೀಡಿಲ್ಲ. ಸತ್ತವರನ್ನು ಬಹಳ ಕೀಳಾಗಿ ನೋಡಿದ್ದೀರಿ ಎಂದು ದೂರಿದರು.