ಬೆಂಗಳೂರು, ಜು 23 (Daijiworld News/MSP): ಕೊರೊನಾ ಉಪಕರಣಗಳ ಖರೀದಿ ಹಾಗೂ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸುಮಾರು 2 ಕೋಟಿ ಅವ್ಯವಹಾರ ನಡೆದಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಐವರು ಸಚಿವರು ಪತ್ರಿಕಾಗೋಷ್ಟಿ ನಡೆಸಿ ತಿರುಗೇಟು ನೀಡಿದ್ದಾರೆ.
ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸಚಿವ ಬಿ.ಶ್ರೀರಾಮುಲು ಹಾಗೂ ವೈದ್ಯಕೀಯ ಡಾ.ಸುಧಾಕರ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದಾರೆ.
"ಭ್ರಷ್ಟಾಚಾರ ನಡೆದಿದೆ ಎನ್ನುವ ಕೌರವರಿಗೆ ಉತ್ತರಿಸಲು ನಾವು ಪಂಚಪಾಂಡವರು ತಯಾರಿದ್ದೇವೆ. ನಿಮ್ಮ ಆರೋಪಗಳಿಗೆ ಉತ್ತರವನ್ನು ದಾಖಲೆ ಸಮೇತ ನೀಡುತ್ತೇವೆ . ಆದರೆ ಜನರ ಮನಸ್ಸಿಗೆ ವಿಷ ಬೀಜ ಬಿತ್ತುವ ಕೆಲಸ ಮಾಡಬೇಡಿ" ಎಂದು ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.
"ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಕಾರ ನೀಡಬೇಕಾದ ಕಾಂಗ್ರೆಸ್ ಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸವನ್ನು ಮಾಡುತ್ತಿದ್ದಾರೆ "ಎಂದು ಸಚಿವ ಆರ್.ಅಶೋಕ್ ಕಿಡಿಕಾರಿದರು.
"ಕಮಾಲೆ ಕಣ್ಣಿಗೆ ಪ್ರಪಂಚವೆಲ್ಲಾ ಹಳದಿಯಂತೆ ಕಾಣಿಸುತ್ತದೆ, 750 ಕೋಟಿ ರೂ. ಖರ್ಚು ಮಾಡಿದ್ದಾರೆಂದು ಅರೋಪಿಸಿದ್ದಾರೆ. ಆದರೆ ಇದುವರೆಗೆ 290 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ ಎಂದು ಮಾಧ್ಯಮಗಳ ಮುಂದೆಯೇ ಲೆಕ್ಕ ಕೊಟ್ಟಿದ್ದೇವೆ".
"ಸೋಂಕು ಕಾಣಿಸಿಕೊಂಡಿದ್ದು ಮಾರ್ಚ್ ನಲ್ಲಿ ಈ ವೇಳೆ ನಮ್ಮಲ್ಲಿ ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ. ಅಂದು ಚೀನಾದೊಂದಿಗೆ ಮನಸ್ತಾಪ ಇಲ್ಲದ ಕಾರಣ ಚೀನಾದಿಂದ ಅಮದು ಮಾಡಿಕೊಳ್ಳಲಾಗುತ್ತಿತ್ತು . ಒಂದೂವರೆ ಲಕ್ಷದಷ್ಟು ಪಿಪಿಇ ಕಿಟ್ ಖರೀದಿಯನ್ನು ಒಮ್ಮೆ ನಾಲ್ಕು ಹಾಗೂ ಮತ್ತೊಮ್ಮೆ ಆರು ಕಾಂಪೊನೆಂಟ್ ನಲ್ಲಿ ಖರೀದಿ ಮಾಡಿದ್ದೇವೆ. ಆದರೆ ಇದೀಗ ಗೋಕುಲದಾಸ್ ಸಂಸ್ಥೆಯಿಂದ 1800 ರೂ. ಅಂತೆ ಪಿಪಿಇ ಕಿಟ್ ಖರೀದಿ ಮಾಡುತ್ತಿದ್ದೇವೆ. ಹೀಗಾಗಿ ಪಿಪಿಇ ಕಿಟ್ ಖರೀದಿಯಲ್ಲೂ ಸಹ ಅಕ್ರಮ ನಡೆದಿಲ್ಲ".
"ಇನ್ನುಅವರ ಆರೋಪದಂತೆ ವೆಂಟಿಲೇಟರ್ ಗೆ ನಾಲ್ಕು ಲಕ್ಷ , ಆದರೆ ಇದು ಕೇವಲ ಅಂಬ್ಯುಲೆನ್ಸ್ ನಲ್ಲಿ ಬಳಕೆ ಮಾಡುವ ವೆಂಟಿಲೇಟರ್ ಬೆಲೆ" ಎಂದು ಅಶ್ವಥ್ ನಾರಾಯಣ್ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಿದರು.