ಬೆಂಗಳೂರು, ಜು. 23, (DaijiworldNews/SM): ಕೊರೊನಾ ಆತಂಕದ ನಡುವೆಯೇ ರಾಜ್ಯದ ರಾಜಕಾರಣದಲ್ಲಿ ಹಲವು ರೀತಿಯ ಕಸರತ್ತುಗಳು ನಡೆಯುತ್ತಿವೆ. ಅದರ ಒಂದು ಭಾಗ ಎಂಬಂತೆ, ಮೇಲ್ಮನೆಯಲ್ಲಿ ಐದು ನಾಮನಿರ್ದೇಶನ ಸ್ಥಾನಗಳ ಮೂಲಕ ಬಿಜೆಪಿ ಸಂಖ್ಯಾಬಲ ಹೆಚ್ಚಿಸಿಕೊಂಡಿದೆ. ಆದರೂ, ಬಿಜೆಪಿಗೆ ಮೇಲ್ಮನೆಯಲ್ಲಿ ಬಹುಮತವಿಲ್ಲ.
ಇದರಿಂದಾಗಿ ವಿಧಾನಪರಿಷತ್ ನ ಸಭಾಪತಿ, ಉಪಸಭಾಪತಿ ಆಯ್ಕೆಗೆ ಬಿಜೆಪಿಗೆ ಅವಕಾಶ ಕಡಿಯಾಗಿದೆ. ವಿಧಾನಪರಿಷತ್ತಿನಲ್ಲಿ ಒಟ್ಟು 75 ಸ್ಥಾನಗಳಿದ್ದು, ಈ ಪೈಕಿ ಕಾಂಗ್ರೆಸ್ ಹೆಚ್ಚು ಸದಸ್ಯ ಬಲ ಹೊಂದಿದೆ. 28 ಸದಸ್ಯರು ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಬಿಜೆಪಿ 27 ಸ್ಥಾನಗಳನ್ನು ಹೊಂದಿದೆ. ಆದರೆ, ಈ ಎರಡೂ ಪಕ್ಷಗಳಿಗೆ ಜೆಡಿಎಸ್ ಹಾಗೂ ಪಕ್ಷೇತರರು ಮ್ಯಾಚ್ ಫಿನಿಷರ್ ತರ ಅನಿಸಲಿದ್ದಾರೆ. ಜೆಡಿಎಸ್ 14, ಪಕ್ಷೇತರ 1 ಹಾಗೂ ಸಭಾಪತಿ ಅವರಿಗೆ ಒಂದು ಮತಗಳಿವೆ. ಮೇಲ್ಮನೆಯಲ್ಲಿ ಸದ್ಯ ಇರುವುದು ಕಾಂಗ್ರೆಸ್ ಬೆಂಬಲಿತ ಸಭಾಪತಿ, ಕರಾವಳಿ ಮೂಲದವರಾದ ಪ್ರತಾಪ್ ಚಂದ್ರಶೆಟ್ಟಿ ಹಾಗೂ ಉಪಸಭಾಪತಿಯಾಗಿ ಜೆಡಿಎಸ್ ನಿಂದ ಧರ್ಮೇಗೌಡರಿದ್ದಾರೆ.
ಒಂದು ವೇಳೆ ಮುಂಬರಲಿರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಲ್ಲಿ ಸಭಾಪತಿ ಹಾಗೂ ಉಪಸಭಾಪತಿ ಸ್ಥಾನ ಅವರಿಗೆ ಸಿಗಲಿದೆ. ಇನ್ನು ಸಭಾಪತಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಪೈಪೋಟಿ ನಡೆಯಬೇಕಾದಲ್ಲಿ ಜೆಡಿಎಸ್ ಹಾಗೂ ಪಕ್ಷೇತರರು ಬೆಂಬಲ ನೀಡಬೇಕು. ಆ ಸಂದರ್ಭದಲ್ಲಿ ಕದನ ಕುತೂಹಲವೇರ್ಪಡಲಿದೆ.
ಇನ್ನು ಈಗಾಗಲೇ ಜೂನ್ ನಲ್ಲಿಯೇ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಕೊರೊನಾ ಕಾರಣದಿಂದಾಗಿ ಇದು ಸಾಧ್ಯವಾಗಿಲ್ಲ. ಚುನಾವಣೆ ನಡೆಯುವ ತನಕ ಬಿಜೆಪಿಗೆ ಬಹುಮತವಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಯಾವುದೇ ಸ್ಥಾನ ಸಿಗದೆ, ಬಿಜೆಪಿ ೨ ಗೆದ್ದುಕೊಂಡರೂ ಬಹುಮತ ಸಾಧಿಸಬಹುದಾಗಿದೆ. ಒಂದೊಮ್ಮೆ ಬಿಜೆಪಿ ಎರಡು ಸ್ಥಾನ ಪಡೆಯಲು ಪರದಾಡಿದ್ದಲ್ಲಿ, ಸಭಾಪತಿ, ಉಪಸಭಾಪತಿ ಸ್ಥಾನವನ್ನು ಅನಿವಾರ್ಯವಾಗಿಯೇ ಕೈಚೆಲ್ಲಬೇಕಾಗುತ್ತದೆ. ಆದರೆ, ಚುನಾವಣೆ ನಡೆಯುವ ತನಕ ಯಾವುದನ್ನು ನಿರ್ಧರಿಸುವಂತಿಲ್ಲ.