ಬೆಂಗಳೂರು, ಜು 24 (Daijiworld News/MSP): ರಾಜ್ಯದಲ್ಲಿ 5 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಆಕರ್ಷಣೆ, 20 ಲಕ್ಷ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಹಾಗೂ ಕೈಗಾರಿಕಾಭಿವೃದ್ದಿಯಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ದಿಗೆ ಅನುವು ಮಾಡಿಕೊಡುವಂತಹ ನೂತನ ಕೈಗಾರಿಕಾ ನೀತಿ 2020-25 ರಾಜ್ಯವನ್ನು ಇನ್ನಷ್ಟು ಕೈಗಾರಿಕಾ ಸ್ನೇಹಿ ಮಾಡುವತ್ತ ಪ್ರಮುಖ ಹೆಜ್ಜೆಯಾಗಿದೆ, ಇದಕ್ಕೆ ಇಂದು ಸಚಿವ ಸಂಪುಟದ ಅನುಮೋದನೆ ದೊರೆತಿರುವುದು ಬಹಳ ಸಂತಸದ ವಿಷಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್ ಅವರು ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಕೈಗಾರಿಕಾ ನೀತಿಗೆ ಅನುಮೋದನೆ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಾದ್ಯಂತ ಸಮತೋಲಿತ, ಸುಸ್ಥಿರ ಮತ್ತು ಸಮಗ್ರ ಕೈಗಾರಿಕಾ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ಐದು ವರ್ಷಗಳ ನಿಯಮಿತ ಅವಧಿಯಲ್ಲಿ ಕೈಗಾರಿಕಾ ನೀತಿಗಳನ್ನು ಜಾರಿಗೊಳಿಸಿದೆ.
2014ನೇ ಸಾಲಿನಲ್ಲಿ ಹಿಂದಿನ ಕೈಗಾರಿಕಾ ನೀತಿಯನ್ನು ಹೊರತಂದಿದ್ದು, ತದನಂತರ ಅನೇಕ ಬದಲಾವಣೆಗಳು ಆಗಿ ಉತ್ಪಾದನೆ ಮತ್ತು ಉತ್ಪಾದನಾ ಸಂಬಂಧಿತ ಸೇವಾ ಕೈಗಾರಿಕೆಗಳು, ಇದರ ಜೊತೆಗೆ ಸ್ಮಾರ್ಟ್ ಉತ್ಪಾದನೆ, ಗ್ರಾಹಕೀಕರಣ, ಸಹಕಾರತ್ವದ ಉತ್ಪಾದನೆ ಇತ್ಯಾದಿ ಬೆಳವಣಿಗೆಗಳನ್ನು ಒಳಗೊಂಡಂತೆ ಹೊಸ ಅವಕಾಶಗಳು ಹೊರ ಹೊಮ್ಮಿರುತ್ತದೆ ಎಂದು ಹೇಳಿದರು.
ನೂತನ ಕೈಗಾರಿಕಾ ನೀತಿ 2020-25ರ ಗಮನವು ಕರ್ನಾಟಕ ಕೈಗಾರಿಕಾ ಶಕ್ತಿಯನ್ನು ಬಳಸಿಕೊಂಡು, ಕೈಗಾರೀಕರಣಕ್ಕಾಗಿ ಪರಿಸರವನ್ನು ಶಕ್ತಗೊಳಿಸುವುದು, ಮೂಲಸೌಕರ್ಯಗಳ ಅಭಿವೃದ್ಧಿ, ರಾಜ್ಯದ ಜನರಿಗೆ ವಿಶೇಷವಾಗಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಹಾಗೂ ಟಯರ್-2 & ಟಯರ್-3 ನಗರಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದು ಹಾಗೂ ಬಂಡವಾಳ ಹೂಡಿಕೆಯ ಅಭಿವೃದ್ಧಿಯನ್ನು ರಾಜ್ಯದಲ್ಲಿ ಖಾತರಿಪಡಿಸಲಾಗುವುದು ಎಂದು ತಿಳಿಸಿದರು.