ನವದೆಹಲಿ,ಜು 24 (Daijiworld News/MSP):ಇತ್ತೀಚೆಗೆ ಭಾರತದಲ್ಲಿ ಹಲವು ಚೈನೀಸ್ ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿದ್ದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಇದೀಗ ಮತ್ತೆ ಹಲವಾರು ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಈ ಪೈಕಿ ಹೆಚ್ಚಿನ ಆ್ಯಪ್ ಗಳು ಚೀನಾದ ಮೂಲದವುಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಅಪ್ಲಿಕೇಶನ್ಗಳಾದ ಹೆಲೋ ಲೈಟ್, ಶೇರ್ಇಟ್ ಲೈಟ್, ಬಿಗೊ ಲೈಟ್ ಮತ್ತು ವಿಎಫ್ವೈ ಲೈಟ್ - ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆ್ಯಪ್ ಸ್ಟೋರ್ನಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾದ ನಡುವೆ ಸಂಘರ್ಷದ ಹಿನ್ನಲೆಯ ಬಳಿಕ, ಕಳೆದ ತಿಂಗಳಷ್ಟೇ ಜನಪ್ರಿಯ ವಿಡಿಯೋ ಆ್ಯಪ್ ಟಿಕ್ ಟಾಕ್ ಸಹಿತ 59 ಚೈನಾ ಮೂಲದ ಅಪ್ಲಿಕೇಶನ್ ಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ಭಾರತ-ಚೀನಾದ ನಡುವೆ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಈ ನಿಷೇಧ ಮಹತ್ವವನ್ನು ಪಡೆದುಕೊಂಡಿತ್ತು.
ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಭದ್ರತೆಗೆ ಅಪಾಯವನ್ನು ತಂದೊಡ್ಡುತ್ತಿರುವುದರಿಂದ ಆ್ಯಪ್ಗಳನ್ನು ನಿಷೇಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿತ್ತು.