ನವದೆಹಲಿ,ಜು 24 (Daijiworld News/MSP): ಕೇವಲ 30 ಸೆಕೆಂಡ್ ಗಳ ಒಳಗಾಗಿ ಕೊರೊನಾ ಸೋಂಕು ಪರೀಕ್ಷೆ ಮಾಡುವ ಟೆಸ್ಟಿಂಗ್ ಕಿಟ್ ಅಭಿವೃದ್ಧಿ ಪಡಿಸಲು ಇಸ್ರೇಲ್ ಹಾಗೂ ಭಾರತ ಕೈಜೋಡಿಸಿದ್ದು, ಇದಕ್ಕಾಗಿ ಹಿರಿಯ ವಿಜ್ಞಾನಿಗಳ ತಂಡವನ್ನು ಭಾರತಕ್ಕೆ ಕಳುಹಿಸಿಕೊಡಲು ಇಸ್ರೇಲ್ ನಿರ್ಧರಿಸಿದೆ.
ಈ ಸಂಬಂಧ ಭಾರತ ಮತ್ತು ಇಸ್ರೇಲ್ ವಿಜ್ಞಾನಿಗಳು ಜೊತೆಗೂಡಿ ಕಾರ್ಯನಿರ್ವಹಿಸುತ್ತಿದ್ದು, ಇಸ್ರೇಲ್ ನ ಟೆಲ್ ಅವಿವ್ ನಿಂದ ಇಸ್ರೇಲಿ ವಿಜ್ಞಾನಿಗಳ ತಂಡ ವಿಶೇಷ ವಿಮಾನದಲ್ಲಿ ಭಾರತಕ್ಕೆ ಬರಲಿದೆ.
ವಿಶೇಷ ವಿಮಾನದಲ್ಲಿ ವಿಜ್ಞಾನಿಗಳ ತಂಡ ಭಾರತಕ್ಕೆ ಆಗಮಿಸಲಿದೆ. ಇಸ್ರೇಲ್ ವಿಜ್ಞಾನಿಗಳು ತಮ್ಮ ಜೊತೆಗೆ ಇಸ್ರೇಲಿ ತಂತ್ರಜ್ಞಾನವನ್ನ ತರಲಿದ್ದಾರೆ. ಮುಖ್ಯ ವಿಜ್ಞಾನಿ ಕೆ. ವಿಜಯ ರಾಘವನ್ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿಗಳೊಂದಿಗೆ ಈ ತಂಡವು ತಪಾಸಣೆ ಕಿಟ್ ಆವಿಷ್ಕಾರದಲ್ಲಿ ತೊಡಗಿಕೊಳ್ಳಲಿದೆ.
" ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಕಿಟ್ ಅನ್ನು ಮತ್ತಷ್ಟು ಉತ್ತಮಪಡಿಸಿ ಕೇವಲ 30 ಸೆಕೆಂಡ್ಗಳಲ್ಲಿ ಫಲಿತಾಂಶ ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿ'' ಎಂದು ಇಸ್ರೇಲ್ ರಾಯಭಾರ ಕಚೇರಿ ತಿಳಿಸಿದೆ.
ಇಸ್ರೇಲ್ ವಿಜ್ಞಾನಿಗಳು ಮಾತ್ರವಲ್ಲದೆ ಅತ್ಯುತ್ತಮ ತಂತ್ರಜ್ಞಾನದ ವೆಂಟಿಲೇಟರ್ಗಳು ಕೂಡಾ ಭಾರತಕ್ಕೆ ಬರಲಿವೆ. ಇದಕ್ಕಾಗಿ ಇಸ್ರೇಲಿನ ವಿದೇಶಾಂಗ ಸಚಿವಾಲಯ ವಿಶೇಷ ಅನುಮತಿ ನೀಡಿದೆ.