ಮಧ್ಯಪ್ರದೇಶ, ಜು 24 (Daijiworld News/MSP): ಸೆಲ್ಫಿ ಕ್ರೇಜ್ ನಿಂದ ಸಹೋದರಿಯರಿಬ್ಬರು ನೀರಿನ ಪ್ರವಾಹದಲ್ಲಿ ಸಿಲುಕಿ ಪ್ರಾಣಭಯದಲ್ಲಿ ಒದ್ದಾಡಿದ ಘಟನೆ ಮಧ್ಯಪ್ರದೇಶದ ಚಿಂದ್ವಾರದ ಪೆಂಚ್ ನದಿಯಲ್ಲಿ ನಡೆದಿದೆ.
ಕೊನೆಗೆ ನದಿಯ ಮಧ್ಯಭಾಗದಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಬಾಲಕಿಯರನ್ನು ಪೊಲೀಸರು ಮತ್ತು ಸ್ಥಳೀಯ ಆಡಳಿತ ಯಶಸ್ವಿಯಾಗಿ ರಕ್ಷಿಸಿ ಆಗಬಹುದಾದ ದುರಂತವನ್ನು ತಪ್ಪಿಸಿದ್ದಾರೆ.
ಕೊರೊನಾವೈರಸ್ ನಿರ್ಬಂಧಗಳ ನಡುವೆಯೂ 7-8 ಹುಡುಗಿಯರ ತಂಡವೊಂದು ಪಿಕ್ನಿಕ್ ಗಾಗಿ ಚಿಂದ್ವಾರಾ ಜಿಲ್ಲೆಯ ಬೆಲ್ಖೆಡಿ ಗ್ರಾಮದ ಪೆಂಚ್ ನದಿ ಬಳಿ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಇಬ್ಬರು ಸಹೋದರಿಯರು 'ಪರ್ಫೆಕ್ಟ್ ಸೆಲ್ಫಿ' ಗಾಗಿ ನದಿ ಮಧ್ಯಭಾಗಕ್ಕೆ ತೆರಳಿದ್ದಾರೆ. ಇವರು ನೀರಿಗಿಳಿದಾಗ ನೀರಿನ ಹರಿವು ಕಡಿಮೆ ಇತ್ತು. ಹೀಗಾಗಿ ನದಿಯ ಮಧ್ಯದಲ್ಲಿ ಕಲ್ಲಿನ ಮೇಲೆ ಕುಳಿತು ಸೆಲ್ಪಿ ತೆಗೆಯುವುದರಲ್ಲಿ ತಲ್ಲೀರನಾಗಿದ್ದರು. ಏತನ್ಮಧ್ಯೆ, ನದಿಯ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಏರಿಕೆಯಾಗಿದೆ. ಹೀಗಾಗಿ ಅವರನ್ನು ರಕ್ಷಿಸುವಂತೆ ಅವರ ತಂಡ ಸ್ಥಳೀಯರಲ್ಲಿ ಸಹಾಯ ಯಾಚಿಸಿದ್ದಾರೆ. ಈ ವೇಳೆ ಸ್ಥಳೀಯರು ತಕ್ಷಣ ಈ ಕುರಿತು ಪೊಲೀಸ್ ಮತ್ತು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ರಕ್ಷಿಸಿದ್ದಾರೆ. "ಇಬ್ಬರು ಸುಮಾರು ಒಂದು ಗಂಟೆ ನದಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದರು. ಅವರು ಭಯಭೀತರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ" ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.