ಬೆಂಗಳೂರು, ಜು 24 (Daijiworld News/MSP): "ಕೊವೀಡ್ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಹಾಗೂ ’ಸತ್ಯವಂತ ’ ಸಚಿವರಿಗೆ ಭಯವೇಕೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಬಗ್ಗೆ ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, " ಸಚಿವರುಗಳು ಸತ್ಯವಂತರಾದರೆ ತನಿಖೆ ಬೇಡ ಎನ್ನುವುದು ಯಾಕೆ, ಇದನ್ನೇ ಭಂಡತನದ ಪರಮಾವಧಿ ಅನ್ನುತ್ತಾರೆ. ನಾವು ಅವ್ಯವಹಾರ ನಡೆದಿದೆ ಎಂಬುವುದಕ್ಕೆ 14 ದಾಖಲೆಗಳನ್ನು ಸಲ್ಲಿಸಿದ್ದೇವೆ. ಆದರೆ ಸರ್ಕಾರ ಅದೆಲ್ಲಾವನ್ನು ನಿರಾಕರಿಸುತ್ತದೆ. ನಮ್ಮ ಮತ್ತು ಅವರ ದಾಖಲೆಗಳು ನ್ಯಾಯಾಂಗ ತನಿಖೆಯ ಮುಂದೆ ಬರಲಿ, ಆಗ ಜನರಿಗೆ ಸತ್ಯಾಸತ್ಯತೆಯ ಬಗ್ಗೆ ಅರಿವಿಗೆ ಬರುತ್ತದೆ " ಎಂದು ಹೇಳಿದರು.
" ಈ ದಾಖಲೆಗಳನ್ನು ನಾವು ಸೃಷ್ಟಿಸಿರುವುದಲ್ಲ. ಪ್ರಧಾನ ಮಂತ್ರಿ ಕಚೇರಿಯಿಂದ ಹೊರಡಿಸಿರುವ ಪ್ರಕಟಣೆಯ ಪ್ರಕಾರ ನಾಲ್ಕು ಲಕ್ಷ ರೂ. ವೆಚ್ಚದ 50 ಸಾವಿರ ವೆಂಟಿಲೇಟರ್ ಗಳನ್ನು ಖರೀದಿಸಲಾಗಿದೆ. ಇದಕ್ಕಾಗಿ ಎರಡು ಸಾವಿರ ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದೆ. ಹಾಗಿದ್ರೆ ಕೇಂದ್ರ ಸುಳ್ಳು ಹೇಳಿರುವುದೇ ಅಥವಾ ರಾಜ್ಯ ಸರ್ಕಾರ ಸುಳ್ಳು ಹೇಳಿರುವುದೇ? ಎಂದು ಪ್ರಶ್ನಿಸಿದರು.
"ಈ ಎಲ್ಲಾ ಸತ್ಯಾಂಶ ಜನರಿಗೆ ತಿಳಿಯಬೇಕು. ಭಾರೀ ಪ್ರಮಾಣದ ಅವ್ಯವಹಾರ ನಡೆದಿದ್ದರೂ , ಸತ್ಯವಂತ ಎನ್ನುವ ಸರ್ಕಾರ ತನಿಖೆಗೆ ಆದೇಶ ಮಾಡುವುದಿಲ್ಲ ಎಂದಾದರೆ ಅವರು ’ಕಳ್ಳತನ ’ ಮಾಡಿದ್ದಾರೆ ಎಂದರ್ಥ" ಎಂದು ಆರೋಪಿಸಿದರು.