ಶಿಮ್ಲಾ, ಜು 24 (DaijiworldNews/PY): ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣದಿಂದ ತಂದೆ ಜೀವಾನಾಧಾರವಾದ ಹಸುವನ್ನು ಮಾರಾಟ ಮಾಡಿ ಮಕ್ಕಳ ಆನ್ಲೈನ್ ಕ್ಲಾಸ್ಗೆಂದು ಸ್ಮಾರ್ಟ್ಫೋನ್ ಖರೀದಿಸಿದ್ದಾರೆ.
ಕುಲ್ದೀಪ್ ಅವರಿಗೆ ಇಬ್ಬರು ಮಕ್ಕಳು. ಮಗಳು ಅನು 4ನೇ ತರಗತಿ ಹಾಗೂ ಮಗ ವಾನ್ಶ್ 2ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೊರೊನಾ ಕಾರಣದಿಂದ ಶಾಲೆ ಆರಂಭವಾಗದ ಹಿನ್ನೆಲೆ ಆನ್ಲೈನ್ ಕ್ಲಾಸ್ ಆರಂಭವಾಗಿದೆ. ಆದರೆ, ಮೊಬೈಲ್ ಕೊಡಿಸಲು ಕುಲ್ದೀಪ್ ಅವರಲ್ಲಿ ಹಣವಿರಲಿಲ್ಲ. ಅಲ್ಲದೇ, ಇವರು ಹಣಕ್ಕಾಗಿ ಬ್ಯಾಂಕ್ ಹಾಗೂ ಕೆಲವು ಪರಿಚಯಸ್ಥರಿಂದ ಹಣದ ನೆರವು ಕೇಳಿದ್ದರು. ಎಲ್ಲಿಯೂ ಕೂಡಾ ಇವರಿಗೆ ಹಣ ದೊರಕಲಿಲ್ಲ.
ಆನ್ಲೈನ್ ಕ್ಲಾಸ್ ಆರಂಭ ಮಾಡಿರುವ ಶಿಕ್ಷಕರು, ಮೊಬೈಲ್ ಕೊಡಿಸಿ ಮಕ್ಕಳನ್ನು ತರಗತಿಗೆ ಹಾಜರು ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಶಿಕ್ಷಕರ ಒತ್ತಡದ ಕಾರಣ ಕುಟುಂಬದ ಏಕೈಕ ಆಧಾರವಾಗಿದ್ದ ಹಸುವನ್ನು ಮಾರಲು ತೀರ್ಮಾನ ಮಾಡಿದ್ದಾರೆ.
ಕುಲ್ದೀಪ್ ಅವರ ಜೀವನ ಸಾಗಿಸಲು ಇದ್ದುದು ಒಂದು ಹಸು ಮಾತ್ರ. ಹಸುವಿನ ಹಾಲು ಮಾರಿ ಜೀವನ ನಡೆಸುತ್ತಿದ್ದರು. ಆದರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎನ್ನುವ ಸಲುವಾಗಿ ಹಸುವನ್ನು ಮಾರಿ ಮೊಬೈಲ್ ಖರೀದಿಸಿದ್ದಾರೆ. ಆದರೆ, ಹಸು ಮಾರಿ ಅವರಿಗೆ ದೊರಕಿದ ಹಣ ಕೇವಲ ಆರು ಸಾವಿರ ಮಾತ್ರ.
ಒಂದೇ ಫೋನ್ ಇರುವ ಕಾರಣ ಇಬ್ಬರೂ ಮಕ್ಕಳೂ ಕೂಡಾ ಆನ್ಲೈನ್ ಕ್ಲಾಸ್ ಮಿಸ್ ಆಗುವ ಭಯದಲ್ಲಿ ಅಳುತ್ತಿದ್ದು, ಮಕ್ಕಳ ಈ ಸ್ಥಿತಿಯನ್ನು ತಂದೆಗೆ ನೋಡಲಾಗುತ್ತಿಲ್ಲ. ಈ ವಿಚಾರ ಬಿಜೆಪಿ ಶಾಸಕ ರಮೇಶ್ ಧವಾಲಾ ಅವರಿಗೆ ತಿಳಿದಿದ್ದು, ನೆರವಾಗುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.