ಪುಣೆ, ಜು 24 (DaijiworldNews/PY): 85ರ ಇಳಿವಯಸ್ಸಿನಲ್ಲೂ ಹೊಟ್ಟೆ ಪಾಡಿಗಾಗಿ ರಸ್ತೆಗಿಳಿದು ಲಾಠಿಕಾಠಿ ಸಮರ ಕಲೆ ಪ್ರದರ್ಶಿಸುತ್ತಿರುವ ವಿಡಿಯೋ ನೋಡಿದ ರಿತೇಶ್ ದೇಶ್ಮುಖ್ ಅವರು, ಯಾರಾದರೂ ದಯವಿಟ್ಟು ಅವರ ವಿಳಾಸ ತಿಳಿಸಿ ಎಂದು ಕೇಳಿದ್ದು, ಅವರನ್ನು ವಾರಿಯರ್ ಆಜಿ ಮಾ ಎಂದಿದ್ದಾರೆ.
ಪುಣೆಯ ಹ್ಯಾಡ್ಪ್ಸರ್ನ ನಿವಾಸಿ 85 ವರ್ಷದ ವೃದ್ದೆ ಶಾಂತಾ ಬಾಯಿ ಪವಾರ್ ತಮ್ಮ ರಸ್ತೆಗಿಳಿದು ಹೊಟ್ಟೆ ಪಾಡಿಗಾಗಿ ಈ ಸಮರಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದನ್ನು ನೋಡಿದ ದಾರಿ ಹೋಕರು ತಮ್ಮ ಕೈಲಾದ ಹಣವನ್ನು ನೀಡುತ್ತಿದ್ದಾರೆ.
ಈ ಲಾಠಿಕಾಠಿಯನ್ನು ನಾನು ನನ್ನ 8ನೇ ವಯಸ್ಸಿನಿಂದಲೇ ಮಾಡುತ್ತಿದ್ದೇನೆ. ಲಾಠಿಕಾಠಿ ವಿದ್ಯೆಯನ್ನು ನನ್ನ ತಂದೆ ನನಗೆ ಕಲಿಸಿಕೊಟ್ಟಿದ್ದರು. ಜನರು ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿಯುತ್ತಿದ್ದು, ಈ ಲಾಠಿಕಾಠಿ ಪ್ರದರ್ಶನದಿಂದ ನಾನು ಜನರಿಗೆ ಎಚ್ಚರಿಸುತ್ತಿದ್ದೇನೆ. ಜನರು ನನಗೆ ಕೈಲಾದ ಹಣವನ್ನು ನೀಡುತ್ತಿದ್ದಾರೆ ಎಂದು ಶಾಂತಾಬಾಯಿ ಪವಾರ್ ತಿಳಿಸಿದ್ದಾರೆ.
ವೃದ್ದೆಯ ಈ ಸಮರಕಲೆ ಪ್ರದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಅವರು, ಯಾರಾದರೂ ದಯವಿಟ್ಟು ಅವರ ವಿಳಾಸವನ್ನು ನನಗೆ ನೀಡಬಹುದೇ? ವಾರಿಯರ್ ಆಜಿ ಮಾ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಬಳಿಕ ಅವರು ವೃದ್ದೆಯ ವಿಳಾಸವನ್ನು ಕಂಡುಕೊಂಡಿದ್ದು, ತುಂಬಾ ಧನ್ಯವಾದಗಳು. ಎಲ್ಲರಿಗೂ ಸ್ಪೂರ್ತಿದಾಯಕವಾದ ಆಜಿ ಮಾ ಬಗ್ಗೆ ತಿಳಿದುಕೊಂಡೆ. ನಾವು ಈಗ ಅವರ ಸಂಪರ್ಕದಲ್ಲಿದ್ದೇವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.