ಬೆಂಗಳೂರು, ಜು 25 (DaijiworldNews/PY): ಕೆ.ಎಸ್.ಆರ್.ಟಿ.ಸಿ ಸೇರಿದಂತೆ ಬಿಎಂಟಿಸಿ, ವಾಯುವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ಜೂನ್ ಹಾಗೂ ಜುಲೈ ತಿಂಗಳ ವೇತನಕ್ಕಾಗಿ 426 ಕೋಟಿ ರೂ. ಅನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಸಾರಿಗೆ ಸಿಬ್ಬಂದಿಗಳಿಗೆ ವೇತನ ಪಾವತಿಸುವ ಸಲುವಾಗಿ ಒಟ್ಟು 961 ಕೋಟಿ.ರೂ.ಗಳನ್ನು ರಾಜ್ಯ ಸರ್ಕಾರವು ಪಾವತಿ ಮಾಡಲು ತೀರ್ಮಾನ ಮಾಡಿದ್ದು, ಈಗಾಗಲೇ ಜೂನ್ ಹಾಗೂ ಜುಲೈ ತಿಂಗಳ ವೇತನಕ್ಕಾಗಿ ಸುಮಾರು 426 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸರ್ಕಾರ ಬಿಡುಗಡೆ ಮಾಡಿರುವ ಹಣದಿಂದ ಸಾರಿಗೆ ಸಿಬ್ಬಂದಿಗಳಿಗೆ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗಿನ ವೇತನವನ್ನು ಭರಿಸಲು ಅನುಕೂಲವಾಗಿರುವುದ್ದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಾರಿಗೆ ಸಿಬ್ಬಂದಿಗಳಿಗೆ ತಕ್ಷಣವೇ ವೇತನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದ್ದು, ಮನವಿಗೆ ಕೂಡಲೇ ಸ್ಪಂದನೆ ನೀಡಿರುವ ಸಿಎಂ ಬಿಎಸ್ವೈ ಅವರಿಗೆ ಲಕ್ಷ್ಮಣ ಸವದಿ ಧನ್ಯವಾದ ತಿಳಿಸಿದ್ದಾರೆ.