ನವದೆಹಲಿ, ಜು 25 (DaijiworldNews/PY): ಹಣ, ಚಿನ್ನ, ವಾಹನಗಳು ಕಳ್ಳತನ ಆಗಿರುವ ಬಗ್ಗೆ ಕೇಳಿರುತ್ತೀರಿ. ಆದರೆ, ತುಳಸಿ ಗಿಡಗಳು ಕಳವಾಗಿರುವುದನ್ನು ಕೇಳಿದರೆ ಆಶ್ಚರ್ಯವಾಗಬಹುದು. ಔಷಧೀಯ ಗುಣವನ್ನು ಹೊಂದಿರುವ ತುಳಸಿ ಗಿಡಗಳು ಕಳವಾಗಿರುವ ಘಟನೆ ಹರಿಯಾಣ ಹಾಗೂ ಚಂಡೀಗಡದಲ್ಲಿ ನಡೆದಿದೆ.
ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಜನರು ಔಷಧೀಯ ಸಸ್ಯಗಳು ಸೇರಿದಂತೆ ಗಿಡಮೂಲಿಕೆಗಳನ್ನು ಬಳಸುತ್ತಿದ್ದಾರೆ. ತುಳಸಿಯಲ್ಲಿ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು. ತುಳಸಿ ಗಿಡಗಳಿಗೆ ಭಾರಿ ಬೇಡಿಕೆ ಬಂದಿದೆ. ಈ ಕಾರಣದಿಂದ ತುಳಸಿ ಗಿಡಗಳು ಕಣ್ಣಿಗೆ ಬಿದ್ದ ತಕ್ಷಣ ಅದನ್ನು ಕದಿಯುತ್ತಾರೆ.
ಇತ್ತೀಚೆಗೆ ಇಂತಹ ಪ್ರಕರಣಗಳು ಹರಿಯಾಣ ಹಾಗೂ ಚಂಡೀಗಡದಲ್ಲಿ ನಿರಂತರವಾಗಿ ನಡೆಯುತ್ತಿವೆ. ಫರಿದಾಬಾದ್, ಕರ್ನಾಲ್, ಹಿಸಾರ್ ಹಾಗೂ ಗುರುಗ್ರಾಮಗಳಲ್ಲಿಯೂ ಕೂಡಾ ತುಳಸಿ ಗಿಡಗಳನ್ನು ಕಳವು ಮಾಡುವ ಪ್ರಕರಣಗಳು ವರದಿಯಾಗಿವೆ.
ಮೊದಲು ಜನರು ತಮ್ಮ ನೆರೆಹೊರೆಯ ಮನೆಯವರಿಂದ ತುಳಸಿ ಎಲೆಗಳನ್ನು ಕೇಳಿ ಪಡೆದುಕೊಳ್ಳುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ತುಳಸಿ ಗಿಡಗಳೇ ನಾಪತ್ತೆ ಆಗುತ್ತಿವೆ. ಇನ್ನು ತುಳಸಿ ಗಿಡಗಳಿಗೆ ನರ್ಸರಿಗಳಲ್ಲಿಯೂ ಕೂಡಾ ಭಾರೀ ಬೇಡಿಕೆ ಬಂದಿದ್ದು. ಹೆಚ್ಚಾಗಿ ಮಾರಾಟವಾಗುತ್ತಿವೆ. ಅಲ್ಲದೇ, ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದ್ದ ತುಳಸಿ ಗಿಡಗಳು ಈಗ 250 ರೂ.ಗಳಿಗೆ ಮಾರಾಟವಾಗುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡದ್ದಾರೆ.