ಬೆಂಗಳೂರು, ಜು 25 (Daijiworld News/MSP): ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದ್ದು, "ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರಡಿ" ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಳ್ಳಲು ಮುನಿರತ್ನ ಕೂಡಾ ಒಬ್ಬರು ಕಾರಣರು. ಆದರೆ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ಮುಖಂಡ ಮುನಿರತ್ನ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿ "ಸೃಜನಶೀಲ ನಿರ್ಮಾಪಕರು ಮತ್ತು ಆತ್ಮೀಯರೂ ಆದ ಶ್ರೀ ಮುನಿರತ್ನ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು"ಎಂದು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.
ಆದರೆ ಇದು ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದ್ದು, "ನಮಗೆಲ್ಲ ನೋವು ಕೊಡಬೇಡಿ, ಹೀಗೆ ಬಹಿರಂಗವಾಗಿ ಫೋಟೋ ಹಾಕಿ ನಿಷ್ಠಾವಂತ ಕಾರ್ಯಕರ್ತರ ಮಾನ ಮರ್ಯಾದೆ ಹಾಳು ಮಾಡುವ ಬದಲು ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಬಿಡಿ" , "ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ ನೀವು ಶುಭಕೋರಬಾರದಿತ್ತು" ಅಣ್ಣ ನಿನಗೆ ರಾಜಕೀಯ ಮಾಡೋದು ಬರಲ್ಲ ಸಿನಿಮಾ ಮಾಡ್ಕೊಳ್ಳಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡೋದು ಸೂಕ್ತ", "ಯುವ ಅಧ್ಯಕ್ಷ ಸ್ಥಾನವನ್ನ ಗ್ರೌಂಡ್ ಕೆಲಸ ಮಾಡೋರಿಗೆ ಬಿಟ್ಟು ಕೊಡ್ರಿ ಇಲ್ಲಾಂದ್ರೆ ಪಕ್ಷ ಹಾಳಾಗುತ್ತೆ, ನೀವು ಸಿನಿಮಾ ಮಾಡ್ಕೊಂಡು ಆರಾಮಾಗಿರಿ" ಎಂದು ತಮ್ಮದೇ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಪ್ರತಿಕ್ರಿಯೆ ನೀಡಿರುವ ನಿಖಿಲ್ ಕುಮಾರಸ್ವಾಮಿ "ಎಲ್ಲರ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ . ನಿರ್ಮಾಪಕನಿಗೆ ನಟನಾಗಿ ನಾನು ಶುಭಕೋರಿದ್ದೇನೇ ಹೊರತು ಯುವ ಜನತಾದಳ ನಾಯಕನಾಗಿ ಅಲ್ಲ, ರಾಜಕೀಯ ಸಂಘರ್ಷಗಳನ್ನು ಮೀರಿ ದೇವೇಗೌಡರು ಮೋದಿ ಅವರಿಗೆ ಶುಭ ಕೋರುತ್ತಾರೆ . ಮೋದಿ ದೇವೇಗೌಡರಿಗೆ ಶುಭ ಕೋರುತ್ತಾರೆ . ಇದು ರಾಜಕೀಯದ ಸತ್ಸಂಪ್ರದಾಯ .ಹೀ ಗಾಗಿ ನನ್ನ ಶುಭಕೋರಿಕೆಯಲ್ಲಿ ತಪ್ಪಿರದು ಎಂದು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.