ತೆಲಂಗಾಣ, ಜು 25 (DaijiworldNews/PY): ತಾತ್ಕಾಲಿಕ ರಸ್ತೆ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದರಿಂದ ಹರಿಯುತ್ತಿರುವ ನೆರೆಯ ನಡುವೆಯೇ ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ತೆಲಂಗಾಣದ ಗುಂಡಾಲ ಜಿಲ್ಲೆಯ ರೊಲ್ಲಗಡ್ಡ ಗ್ರಾಮದಲ್ಲಿ ನಡೆದಿದೆ.
ಗುಂಡಾಲದ ರೊಲ್ಲಗಡ್ಡ ಗ್ರಾಮದ ನಿವಾಸಿಯಾದ ಮಮತಾ ಅವರು ತುಂಬು ಗರ್ಭಿಣಿಯಾಗಿದ್ದು, ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮನೆಯವರು ಆಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ, ಆ ಊರಿಗೆ ಸಂಪರ್ಕಿಸುವ ಮಣ್ಣಿನ ರಸ್ತೆಯು ಮಳೆಯಿಂದ ಕೊಚ್ಚಿಹೋದ ಕಾರಣ ಆಂಬುಲೆನ್ಸ್ಗೆ ನದಿ ದಾಟಲು ಸಾಧ್ಯವಾಗಲಿಲ್ಲ. ಬೇರೆ ದಾರಿಕಾಣದೇ ಮನೆಯವರು ಹರಿಯುತ್ತಿರುವ ನೆರೆಯ ನಡುವೆಯೇ ತುಂಬು ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತುಕೊಂಡು ನದಿ ದಾಟಿದ್ದಾರೆ.
ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಗುಂಡಾಲದ ರೊಲ್ಲಗಡ್ಡ ಗ್ರಾಮದಲ್ಲಿ ಹೆಚ್ಚು ಬುಡಕಟ್ಟು ಸಮುದಾಯದ ಜನರು ವಾಸ ಮಾಡುತ್ತಿದ್ದು, ಅವರಿಗೆ ಯಾವುದೇ ಸೌಕರ್ಯಗಳಿಲ್ಲ. ತುರ್ತು ಸೌಕರ್ಯದ ಅಗತ್ಯವಿದಲ್ಲಿ ಅವರು ಸುಮಾರು 8 ಕಿ.ಮೀ ದೂರ ಬರಬೇಕಾಗುತ್ತದೆ. ಅಲ್ಲದೇ, ಮಳೆಗಾಲದ ಸಮಯದಲ್ಲಿ ಈ ಪ್ರದೇಶದ ಜನರು ಒಂದಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.