ಬೆಳಗಾವಿ, ಜು 25 (DaijiworldNews/PY): ಕಳೆದ ವರ್ಷ ನವೆಂಬರ್ನಲ್ಲಿ ಗೋಕಾಕ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪ್ರಕರಣದ ಹಿನ್ನೆಲೆ ಗೋಕಾಕ್ನ ಜೆಎಂಎಫ್ಸಿ ನ್ಯಾಯಾಲಯವು ಸೆ.1ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭ ಗೋಕಾಕ್ನ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕಳೆದ ನವೆಂಬರ್ 23ರಂದು ಬಿಜೆಪಿ ಅಭ್ಯರ್ಥಿಯಾದ ರಮೇಶ ಜಾರಕಿಹೊಳಿ ಅವರ ಪರ ಚುನಾವಣೆ ಸಮಾವೇಶ ನಡೆದಿದ್ದು, ಈ ವೇಳೆ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಬಿಎಸ್ವೈ ಅವರು, ವೀರಶೈವ ಲಿಂಗಾಯತ ಸಮುದಾಯದ ಮತದಾರರ ಯಾವುದೇ ಮತಗಳು ಬೇರೆ ಕಡೆ ಹೋಗದಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದ್ದರು.
ನ್ಯಾಯಾಧೀಶ ಸಿ.ಕೆ.ವೀರೇಶಕುಮಾರ್ ಅವರು ಕಳೆದ ತಿಂಗಳು 26ರಂದು ಆದೇಶ ನೀಡಿದ್ದು, ಸಮನ್ಸ್ ಜಾರಿಗೊಳಿಸಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿದ್ದ ಲಕ್ಷ್ಮಣ ತುಕ್ಕಪ್ಪ ಹಾಗೂ ಅವರ ಸಹಾಯಕ ಮಾರುತಿ ಗೋವಿಂದ ಉಪ್ಪಾರ ಅವರು, ಚುನಾವಣೆಯ ಸಂದರ್ಭ ನಿರ್ದಿಷ್ಟ ಜನಾಂಗವನ್ನು ಓಲೈಕೆ ಮಾಡಿದ್ದು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆಯಾಗಿದೆ ಎಂದು ಜನಪ್ರನಿಧಿಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಪ್ರಕರಣ ತನಿಖೆ ಮಾಡಿದ್ದು, ನ್ಯಾಯಾಲಯಕ್ಕೆ ಬಿ ವರದಿ ನೀಡಿದ್ದಾರೆ.
ನ್ಯಾ.ಸಿ.ಕೆ ವೀರೇಶಕುಮಾರ್ ಅವರು ಈ ವಿಚಾರದ ಬಗ್ಗೆ ವಿಚಾರಣೆ ನಡೆಸಿದ್ದು, ಈ ಪ್ರಕರಣದ ಬಗ್ಗೆ ಪುರಾವೆಗಳು ಲಭ್ಯ ಇದೆ ಎನ್ನುವ ವಿಚಾರ ನ್ಯಾಯಾಲಯಕ್ಕೆ ತಿಳಿದಿದೆ. ಈ ಕಾರಣದಿಂದ ಪೊಲೀಸರು ಸಲ್ಲಿಸಿರುವ ಬಿ ವರದಿಯನ್ನು ವಜಾ ಮಾಡಲಾಗಿದೆ ಎಂದಿದ್ದಾರೆ.