ನವದೆಹಲಿ, ಜು 25 (Daijiworld News/MSP): ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ 30 ವರ್ಷದ ಯುವಕ ಮೇಲೆ ಕೊವೀಡ್ -19 ಕೋವಾಕ್ಸಿನ್ ಲಸಿಕೆಯ ಮೊತ್ತ ಮೊದಲ ಮಾನವ ಪ್ರಯೋಗವನ್ನು ಮಾಡಲಾಗಿದೆ.
ಶುಕ್ರವಾರ ಬೆಳಗ್ಗೆ ಇಂಟ್ರಾಮಸ್ಕುಲರ್ ಲಸಿಕೆಯ 0.5 ಮಿಲಿ ಮೊದಲ ಡೋಸ್ ಅವರಿಗೆ ನೀಡಲಾಗಿದೆ. ಅವರನ್ನು ಎರಡು ಗಂಟೆಗಳ ಕಾಲ ಮೇಲ್ವಿಚಾರಣೆಗೊಳಪಡಿಸಲಾಗಿತ್ತು. ಪರಿಸ್ಥಿತಿಗಳ ನಿರಂತರ ಮೇಲ್ವಿಚಾರಣೆಗಾಗಿ ಒಂದು ಡೈರಿಯನ್ನು ಅವರಿಗೆ ಹಸ್ತಾಂತರಿಸಲಾಗಿದೆ. ಅವರು ಯಾವುದಾದರೂ ವೈದ್ಯಕೀಯ ಸಮಸ್ಯೆಗಳನ್ನು ಎದುರಿಸುತ್ತಾರೆಯೇ ಎಂದು ಅರ್ಥಮಾಡಿಕೊಳ್ಳಲು ನಾವು ಅವರನ್ನು ಕನಿಷ್ಠ ಒಂದುವಾರದವರೆಗೆ ಗಮನಿಸುತ್ತಿರುತ್ತೇವೆ. ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಈ ಲಸಿಕೆಯ ಪ್ರಯೋಗದ ನಂತರ ಎರಡು ವಾರಗಳವರೆಗೆ ಆರೋಗ್ಯದ ಮೇಲ್ವಿಚಾರಣೆ ಮಾಡಿದ ಬಳಿಕ ಅದೇ ವ್ಯಕ್ತಿಗೆ ಎರಡನೇ ಡೋಸ್ ನೀಡಲಾಗುತ್ತದೆ" ಏಮ್ಸ್ ನ ಕೋವಿಡ್ -19 ಲಸಿಕೆ ಪ್ರಯೋಗ ಪ್ರಧಾನ ತನಿಖಾಧಿಕಾರಿ ಡಾ.ಸಂಜಯ್ ರೈ ಹೇಳಿದ್ದಾರೆ.
" ಈ ಪ್ರಯೋಗದ ಸಮಯದಲ್ಲಿ 100 ಆರೋಗ್ಯವಂತ ಜನರಿಗೆ ಏಮ್ಸ್ ನಲ್ಲಿ ಲಸಿಕೆ ನೀಡಲಾಗುವುದು. ಲಸಿಕೆ ಪ್ರಯೋಗದ ಮೊದಲ ಹಂತವು 18 ರಿಂದ 55 ವರ್ಷದೊಳಗಿನ ಆರೋಗ್ಯವಂತ ಜನರ ಮೇಲೆ ಮಾಡಲಾಗುವುದು. ಮಾತ್ರವಲ್ಲದೆ ಗರ್ಭವತಿಯಲ್ಲದ ಮಹಿಳೆಯರ ಮೇಲೂ ಮೊದಲ ಹಂತದಲ್ಲಿ ಪ್ರಯೋಗ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ, 12 ರಿಂದ 65 ವರ್ಷದೊಳಗಿನ 750 ಜನರನ್ನು ನೇಮಕ ಮಾಡಲಾಗುವುದು. ಈಗಾಗಲೇ, ಸುಮಾರು 1,800 ಸ್ವಯಂಸೇವಕರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಲಸಿಕೆಯ ಸುರಕ್ಷತೆಯನ್ನು ನಾವು ನೋಡುತ್ತೇವೆ, ಯಾಕೆಂದರೆ ಇದು ಅತ್ಯಂತ ಪ್ರಾಮುಖ್ಯತೆಯ ವಿಚಾರವಾಗಿದೆ ಇದರೊಂದಿಗೆ ನಾವು ಡೋಸ್ ಪ್ರಮಾಣವನ್ನು ಲೆಕ್ಕಹಾಕಲಾಗುತ್ತದೆ " ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಐಸಿಎಂಆರ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಾಕ್ಸಿನ್, ಮಾನವನ ಪ್ರಾಯೋಗಿಕ ಪರೀಕ್ಷೆಗಳಿಗೆ ಇತ್ತೀಚೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಯಿಂದ ಅನುಮೋದನೆ ಪಡೆದಿತ್ತು.