ನವದೆಹಲಿ, ಜು. 25 (DaijiworldNews/MB) : ''ನನ್ನ ವಿರುದ್ಧ ನಡೆಯುತ್ತಿರುವ 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯ ಬಳಿಕ ನನಗೆ ಮರಣದಂಡನೆಯ ಶಿಕ್ಷೆಯಾದರೆ ನಾನು ಸಂತೋಷವಾಗಿಯೇ ನೇಣುಗಂಬಕ್ಕೆ ಏರುತ್ತೇನೆ'' ಎಂದು ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಹೇಳಿದ್ದಾರೆ.
ಉಮಾ ಭಾರತಿ ಅವರ ಹೇಳಿಕೆಯನ್ನು ದಾಖಲಿಸುವಂತೆ ಕೋರ್ಟ್ ಸೂಚನೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ''ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರಿಗೆ ಹೇಳಿಕೆ ನೀಡಲು ಸೂಚಿಸಿದಂತೆ ಕೋರ್ಟ್ ನನಗೂ ಕೂಡಾ ಹೇಳಿಕೆ ನೀಡಲು ಸೂಚಿಸಿತ್ತು. ಸತ್ಯ ಏನಿದೆಯೋ ಅದನ್ನೇ ಕೋರ್ಟ್ಗೆ ತಿಳಿಸಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ತೀರ್ಪು ಬಂದರೂ ನಾನು ಅದನ್ನು ಸ್ವಾಗತಿಸಲು ಸಿದ್ಧ. ಒಂದು ವೇಳೆ ಮರಣದಂಡನೆ ಶಿಕ್ಷೆಯಾದರೂ ಕೂಡಾ ನಾನು ಸಂತೋಷವಾಗಿಯೇ ನೇಣುಗಂಬಕ್ಕೆ ಕೊರಳೊಡ್ಡುತ್ತೇನೆ'' ಎಂದು ಹೇಳಿದ್ದಾರೆ.
ಈ ಮೊದಲು ಜುಲೈ ತಿಂಗಳ ಪ್ರಾರಂಭದಲ್ಲಿಉಮಾ ಭಾರತಿ ಅವರು ಲಖನೌನಲ್ಲಿರುವ ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು.