ನವದೆಹಲಿ, ಜು. 25 (DaijiworldNews/MB) : 'ಕೇವಲ ಮಾಧ್ಯಮ ಪ್ರಚಾರ ನಿರ್ವಹಣೆ ಮಾಡುವುದರಿಂದ ಕೊರೊನಾವನ್ನು ಎದುರಿಸಲು ಸಾಧ್ಯವಿಲ್ಲ'' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪತ್ರದ ಮೂಲಕ ಟೀಕೆ ಮಾಡಿದ್ದಾರೆ.
''ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಈ ಸಮಯದಲ್ಲಿ 'ಪರೀಕ್ಷೆ ಇಲ್ಲವೆಂದರೆ ಕೊರೊನಾ ಇಲ್ಲ' ಎನ್ನುವ ನೀತಿ ಭಯಾನಕ ವಾತಾವರಣ'ವನ್ನು ನಿರ್ಮಾಣ ಮಾಡಲಿದೆ. ರಾಜ್ಯದ ಹೆಚ್ಚಿನ ನಗರಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ತುಂಬಿ ಹೋಗಿದೆ. ಈವರೆಗೂ ಯಾವುದೇ ಪ್ರಕರಣಗಳು ದಾಖಲಾಗಿರದ ಹಳ್ಳಿಗಳಿಗೂ ಕೊರೊನಾ ವ್ಯಾಪಿಸಿದೆ'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
''ವಾರಣಾಸಿಯಿಂದ ಸಂಸತ್ ಸದಸ್ಯರಾಗಿ ಪ್ರಧಾನಿ ಮೋದಿ ಇದ್ದಾರೆ. ರಕ್ಷಣಾ ಸಚಿವರು ಲಖನೌದಿಂದ ಇದ್ದಾರೆ. ಹಾಗೆಯೇ ಇನ್ನೂ ಅನೇಕ ಕೇಂದ್ರ ಸಚಿವರು ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ಆದರೆ ವಾರಣಾಸಿ, ಲಖನೌ, ಆಗ್ರಾ ಮುಂತಾದ ಸ್ಥಳಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣ ಮಾಡಲು ಕೂಡಾ ಇವರಿಗೆ ಯಾಕೆ ಸಾಧ್ಯವಾಗಿಲ್ಲ'' ಎಂದು ಪ್ರಶ್ನಿಸಿರುವ ಅವರು, ''ಈ ನಡುವೆ ಉತ್ತರ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರಗಳ ಸ್ಥಿತಿಯು ಹೇಳತೀರದು. ಜನರು ಕೊರೊನಾಗಿಂತ ಹೆಚ್ಚಾಗಿ ಅದನ್ನು ನಿರ್ವಹಣೆ ಮಾಡುತ್ತಿರುವ ಸರ್ಕಾರದ ಬಗ್ಗೆ ಹೆಚ್ಚು ಭಯಭೀತರಾಗಿದ್ದಾರೆ. ಜನರು ಕೊರೊನಾ ಪರೀಕ್ಷೆಗೂ ಈಗ ಸಿದ್ಧರಿಲ್ಲ. ಇದು ಯೋಗಿ ಸರ್ಕಾರದ ಬಹು ದೊಡ್ಡ ವೈಫಲ್ಯವಾಗಿದೆ'' ಎಂದು ಯುಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.