ಬಳ್ಳಾರಿ, ಜು. 25 (DaijiworldNews/MB) : ಸುಮಾರು ೬೦ ವರ್ಷಕ್ಕಿಂತ ಮೇಲ್ಪಟ್ಟವರು ಕೊರೊನಾ ಸೋಂಕಿನಿಂದ ಗುಣಮೂಖರಾಗುವುದು ಕಷ್ಟ ಎಂಬ ಅಭಿಪ್ರಾಯಗಳು ಇರುವ ನಡುವೆ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಶತಾಯುಷಿ ವೃದ್ಧೆಯೊಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಶತಾಯುಷಿ ವೃದ್ದೆ ಹಾಲಮ್ಮ, ''ನನ್ನನ್ನು ವೈದ್ಯರು ಬಹಳ ಚೆನ್ನಾಗಿ ಆರೈಕೆ ಮಾಡಿದ್ದಾರೆ. ನನ್ನ ಸಾಮಾನ್ಯ ಆಹಾರದೊಂದಿಗೆ ದಿನಕ್ಕೆ ಒಂದು ಸೇಬು ಹಣ್ಣು ನಾನು ತಿನ್ನುತ್ತಿದ್ದೆ. ವೈದ್ಯರು ನನಗೆ ಔಷಧಿ ಹಾಗೂ ಇಂಜೆಕ್ಷನ್ ಕೊಡುತ್ತಿದ್ದರು. ಈಗ ನಾನು ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆ. ಕೊರೊನಾ ಸಾಮಾನ್ಯ ಶೀತದಂತಿತ್ತು'' ಎಂದು ಹೇಳಿದ್ದಾರೆ.
ಕಳೆದ ಎರಡು ವಾರಗಳ ಹಿಂದೆ ಈ ವೃದ್ದೆ ಹಾಲಮ್ಮನ ಪುತ್ರನಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದ ಕಾರಣ ಆಸ್ಪತ್ರೆಗೆ ತೆರಳಿದಾಗ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ಸೋಂಕು ದೃಢಪಟ್ಟಿತ್ತು. ಬಳಿಕ ಈ ವೃದ್ದೆ ಸೇರಿದಂತೆ ಈ ಮನೆಯಲ್ಲಿದ್ದ ನಾಲ್ಕು ಜನರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು.
ಈ ಶತಾಯುಷಿ ಅಜ್ಜಿಯನ್ನು ಆಸ್ಪತ್ರೆಗೆ ದಾಖಲು ಮಾಡಿದರೆ ಅಲ್ಲಿ ಬೇರೆ ಯಾವುದಾದರೂ ಸೋಂಕು ತಗುಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬ ಕಾರಣಕ್ಕೆ ಸ್ಥಳೀಯ ತಾಲೂಕು ಆಡಳಿತ ಈ ಅಜ್ಜಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಆರಂಭಿಸಿತ್ತು. ಇದೀಗ ಈ ಅಜ್ಜಿ ಸೇರಿದಂತೆ ಮನೆಯ ನಾಲ್ವರೂ ಕೂಡಾ ಕೊರೊನಾ ಮುಕ್ತರಾಗಿದ್ದಾರೆ.