ದೆಹಲಿ, ಜು 25 (Daijiworld News/MSP): ಲಾಕ್ ಡೌನ್ ಹಾಗೂ ಕೊರೊನಾದಿಂದ ದೇಶದ ಬಡ ಜನರು ತೊಂದರೆಯಲ್ಲಿದ್ದರೂ, ಸರ್ಕಾರ ಮಾತ್ರ ಭರ್ಜರಿಯಾಗಿ ಲಾಭ ಗಳಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
"ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಶ್ರಮಿಕ್ ವಿಶೇಷ ರೈಲುಗಳ ಮೂಲಕ ಕೇಂದ್ರ ಸರ್ಕಾರಕ್ಕೆ 428 ಕೋಟಿ ಆದಾಯ ದೊರಕಿದೆ" ಎಂಬ ವರದಿಯನ್ನು ಉಲ್ಲೇಖಿಸಿದ ರಾಹುಲ್ ಬಡವರಿಗೆ ಸೌಕರ್ಯ ಕಲ್ಪಿಸಲು ಹಣ ಪಡೆಯುವ ಮೂಲಕ ಸರ್ಕಾರ ಭರ್ಜರಿ ಲಾಭ ಮಾಡಿಕೊಂಡಿದೆ. ತನ್ಮೂಲಕ ಅದು ಬಡವರ ವಿರೋಧಿ ನೀತಿ ಅನುಸರಿಸಿದೆ ಎಂದು ಕೇಂದ್ರದ ವಿರುದ್ದ ಮತ್ತೊಮ್ಮೆ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರವೂ ಸಾಂಕ್ರಮಿಕ ಪಿಡುಗನ್ನು ಲಾಭವನ್ನಾಗಿ ಪರಿವರ್ತಿಸಿಕೊಂಡಿದೆ ಎಂದು ಟ್ವೀಟ್ನಲ್ಲಿ ರಾಹುಲ್ ಆಕ್ಷೇಪಿಸಿದ್ದಾರೆ. ಇದರೊಮ್ದಿಗೆ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಖರ್ಚು-ಆದಾಯದ ಲೆಕ್ಕವನ್ನು ತಮ್ಮ ಟ್ವೀಟ್ಗೆ ಲಗತ್ತಿಸಿದ್ದಾರೆ.
ಆದರೆ ಇದನ್ನು ವಿರೋಧಿಸಿರುವ ನೆಟ್ಟಿಗರು ರಾಹುಲ್ ಗಾಂಧಿವರೇ ವರದಿ ತಪ್ಪಾಗಿ ಅರ್ಥೈಸಬೇಡಿ , ಶ್ರಮಿಕ್ ರೈಲು ಸಂಚಾರಕ್ಕಾಗಿ ಸರ್ಕಾರ 2142 ಕೋಟಿ ವೆಚ್ಚ ಮಾಡಿದ್ದು ಅದರಲ್ಲಿ 428 ಕೋಟಿ ಆದಾಯ ಬಂದಿದೆ. ಆದರೆ, 1714 ಕೋಟಿ ನಷ್ಟ ಆಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.