ಮೈಸೂರು, ಜು. 25 (DaijiworldNews/MB) : ಕೊರೊನಾ ಸೋಂಕು ಪರೀಕ್ಷೆ ನಡೆಸುವ ಸಂದರ್ಭದಲ್ಲಿ ವ್ಯಕ್ತಿಯೋರ್ವ ತನ್ನ ನಂಬರ್ ಬದಲಾಗಿ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರ ನಂಬರ್ ನೀಡಿ ಅಧಿಕಾರಿಗಳನ್ನು ಯಾಮಾರಿಸಿದ ಘಟನೆ ನಗರದಲ್ಲಿ ನಡೆದಿದೆ.
ಕೊರೊನಾ ಸೋಂಕು ಲಕ್ಷಣಗಳು ಕಂಡು ಬಂದ ಕಾರಣ ಹೆಬ್ಬಾಳದ ನಿವಾಸಿಯೊಬ್ಬ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು ಈ ಸಂದರ್ಭದಲ್ಲಿ ವ್ಯಕ್ತಿಯು ತನ್ನ ಮೊಬೈಲ್ ಸಂಖ್ಯೆ ನೀಡುವ ಬದಲಾಗಿ ಜಿಲ್ಲಾಧಿಕಾರಿಯ ಮೊಬೈಲ್ ನಂಬರ್ ಅನ್ನು ನೀಡಿ ಕಿತಾಪತಿ ಮಾಡಿದ್ದಾನೆ. ಇನ್ನು ಈ ವ್ಯಕ್ತಿಯ ಕೊರೊನಾ ಪಾಸಿಟಿವ್ ಆಗಿದ್ದು ಈ ವ್ಯಕ್ತಿ ನೀಡಿದ ನಂಬರ್ಗೆ ಅಧಿಕಾರಿಗಳು ಕರೆ ಮಾಡಿದಾಗ ಜಿಲ್ಲಾಧಿಕಾರಿ ಕರೆ ಸ್ವೀಕರಿಸಿದ್ದು ಆ ಸಂದರ್ಭದಲ್ಲಿ ಈ ಸೋಂಕಿತ ಅಧಿಕಾರಿಗಳನ್ನು ಯಮಾರಿಸಿರುವುದು ತಿಳಿದು ಬಂದಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರು, ''ಕಂಟ್ರೋಲ್ ರೂಂನಿಂದ ಕರೆ ಮಾಡಿ. ಸರ್ ನಿಮಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕ್ವಾರಂಟೈನ್ ಆಗಿ ಎಂದು ಹೇಳಿದ್ದು ಕೇಳಿ ನನಗೆ ಆಶ್ಚರ್ಯವಾಯಿತು. ಬಳಿಕ ನಾನು ಅಧಿಕಾರಿಗಳಿಗೆ ನಾನು ಜಿಲ್ಲಾಧಿಕಾರಿ ಎಂದು ತಿಳಿಸಿದೆ. ಜನರು ಕ್ವಾರಂಟೈನ್ ಆಗಲು ಹಾಗೂ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಯಾವೆಲ್ಲಾ ದಾರಿಯನ್ನು ಹಿಡಿಯುತ್ತಾರೆ ಎಂಬುದನ್ನು ಕೇಳಿ ನನಗೆ ಆಶ್ಚರ್ಯವಾಗಿದೆ. ಹಾಗೆಯೇ ನಗುವೂ ಬಂತು'' ಎಂದು ಹೇಳಿದ್ದಾರೆ.
''ಈ ವ್ಯಕ್ತಿಯನ್ನು ಸಂಪರ್ಕ ಮಾಡುವ ಇತರ ಮಾಹಿತಿಯೂ ತಪ್ಪಾಗಿ ನೀಡಿದ್ದರೆ, ಬಹಳ ಕಷ್ಟ ಉಂಟಾಗುತ್ತದೆ. ಜನರು ಈ ರೀತಿ ಅಧಿಕಾರಿಗಳ ದಾರಿ ತಪ್ಪಿಸುವ ಕಾರ್ಯ ಬಿಟ್ಟು ಕೊರೊನಾ ವಿರುದ್ಧದ ಹೋರಾಟಕ್ಕೆ ಜನರು ಜೊತೆಯಾಗಬೇಕಾಗಿದೆ. ಕೊರೊನಾ ಹರಡುವುದನ್ನು ತಡೆಗಟ್ಟಲು ಜನರ ಸಹಕಾರ ಬೇಕು'' ಎಂದು ಮನವಿ ಮಾಡಿಕೊಂಡರು.