ನವದೆಹಲಿ, ಜು 26 (Daijiworld News/MSP): ಕೋವಿಡ್-19 ಸೋಂಕು ದೇಹ ಪ್ರವೇಶಿಸುವುದನ್ನು ತಡೆಯಲು ಬಹುತೇಕರು ಬಳಸುವ ಗಾಳಿ ನಿಯಂತ್ರಣ ಕವಾಟವಿರುವ ಎನ್-95 ಮಾಸ್ಕ್ ನಿಂದ ಸೋಂಕು ತಡೆ ಅಸಾಧ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದ ಬೆನ್ನಲ್ಲೇ ಹ್ಯಾಂಡ್ ಸ್ಯಾನಿಟೈಸರ್ ಬಗ್ಗೆಯೂ ಇದೇ ರೀತಿಯ ಎಚ್ಚರಿಕೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ.
ಮಾಸ್ಕ್ ಬಳಕೆ , ಕೈಗಳನ್ನು ಆಗ್ಗಾಗ್ಗೆ ತೊಳೆಯುವುದು, ಸ್ಯಾನಿಟೈಸರ್ ಬಳಸುವುದು ’ಕೊರೊನಾ' ಸೋಂಕಿನ ವಿರುದ್ಧ ಹೋರಾಡುವ ಒಂದು ಅಸ್ತ್ರವಾಗಿದೆ. ಆದರೆ ಅತಿಯಾದ ಸ್ಯಾನಿಟೈಸರ್ ಬಳಕೆಯಿಂದ ಬೇರೆ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ, ಆದ್ದರಿಂದ ಅಗ್ಗಾಗ್ಗೆ ಕೈ ತೊಳೆಯುತ್ತಿರಿ. ಹೆಚ್ಚಾಗಿ ಸ್ಯಾನಿಟೈಸರ್ ಗಳನ್ನು ಬಳಸಬೇಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕ ಡಾ.ಕೆ ಆರ್ ವರ್ಮಾ ಸೂಚನೆ ನೀಡಿದ್ದಾರೆ.
ಇಂತಹ ಸಂದಿಗ್ಧ ಸಮಯದಲ್ಲಿ ಆರೋಗ್ಯ ರಕ್ಷಣೆ ಬಹು ಮುಖ್ಯ. ಇಂಥ ವೈರಸ್ವೊಂದು ದಾಳಿ ಮಾಡುತ್ತದೆ ಎಂದು ಯಾರೂ ಭಾವಿಸಿರಲಿಲ್ಲ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ಗಳನ್ನು ಧರಿಸುವುದನ್ನು ತಪ್ಪಿಸಬೇಡಿ. ಬಿಸಿ ನೀರು ಹೆಚ್ಚಾಗಿ ಕುಡಿಯಿರಿ. ಕೈಗಳನ್ನು ತಪ್ಪದೇ ತೊಳೆದುಕೊಳ್ಳುತ್ತಿರಿ. ಆದರೆ, ಸ್ಯಾನಿಟೈಸರ್ಗಳನ್ನು ಹೆಚ್ಚಾಗಿ ಬಳಸಬೇಡಿ ಎಂದು ವರ್ಮ ಸೂಚಿಸಿದ್ದಾರೆ
ಹ್ಯಾಂಡ್ ಸ್ಯಾನಿಟೈಸರ್ಗಳ ಬಳಕೆಯಿಂದ ವೈರಸ್ ಸಾಯುತ್ತದೆ . ಆದರೆ ಚರ್ಮಕ್ಕೆ ಅಗತ್ಯವಾದ ಬ್ಯಾಕ್ಟೀರಿಯಾಗಳು ನಾಶವಾಗುವ ಸಾಧ್ಯತೆಗಳಿರುತ್ತವೆ. ಸೋಪು, ನೀರು ಇದ್ದಾಗ ಸ್ಯಾನಿಟೈಸರ್ಗಳನ್ನು ಬಳಸುವ ಅಗತ್ಯವಿಲ್ಲಎಂದು ಈ ಹಿಂದೆಯೇ ತಜ್ಞರು ಎಚ್ಚರಿಕೆ ನೀಡಿದ್ದರು.