ಅಯೋಧ್ಯೆ, ಜು 26 (Daijiworld News/MSP): ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮನಮಂದಿರ ನಿರ್ಮಾಣಕ್ಕಾಗಿ ಅಡಿಪಾಯ ಹಾಕುವ ಸಿದ್ಧತೆಗಳು ಭರದಿಂದ ಸಾಗುತ್ತಿರುವಂತೆ, "ಶ್ರೀ ರಾಮ್ ಮಂದಿರ ನಿರ್ಮಾಣ್ ಮುಸ್ಲಿಂ ಕಾರ್ ಸೆವಾಕ್ ಮಂಚ್ ಅಧ್ಯಕ್ಷ ಅಜಮ್ ಖಾನ್ " ತನ್ನನ್ನು ರಾಮಮಂದಿರದ ಭೂಮಿ ಪೂಜೆ ಆಹ್ವಾನಿಸದಿದ್ದರೆ ಜಲಸಮಾಧಿಯಾಗುತ್ತೇನೆ" ಎಚ್ಚರಿಕೆ ನೀಡಿದ್ದಾರೆ.
ರಾಮಮಂದಿರದ ಭೂಮಿ ಪೂಜೆ ಆಗಸ್ಟ್ 5 ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಡಿಪಾಯ ಹಾಕಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಮಮಂದಿರ ನಿರ್ಮಾಣ ಹೋರಾಟಕ್ಕೆ ಸಂಬಂಧಿಸಿದ ನಾಯಕರು ಮತ್ತು ಸಂತರನ್ನು ಆಹ್ವಾನಿಸಲಾಗುವುದು . ಕೊರೊನಾ ವೈರಸ್ನಿಂದಾಗಿ 150 ರಿಂದ 200 ಜನರನ್ನು ಮಾತ್ರ ಆಹ್ವಾನಿಸಲಾಗುತ್ತಿದೆ ಎನ್ನಲಾಗಿದೆ.
ರಾಮ್ ಮಂದಿರ ಚಳವಳಿಯ ಪ್ರವರ್ತಕ ದಿವಂಗತ ಮಹಂತ್ ರಾಮಚಂದ್ರ ದಾಸ್ ಪರಮಹಂಸರ ಸಮಾಧಿಯಲ್ಲಿ ಗೌರವ ಸಲ್ಲಿಸಿದ ಬಳಿಕ ಅಯೋಧ್ಯೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆಗಸ್ಟ್ 5 ರಂದು ನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸದಿದ್ದರೆ ಸರಯು ನದಿಯಲ್ಲಿ ಜಲ ಸಮಾಧಿಯಾಗುತ್ತೇನೆ. ಭಗವಾನ್ ರಾಮನನ್ನು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಜಾತಿಯೊಂದಿಗೆ ಕಟ್ಟಿಹಾಕಲಾಗುವುದಿಲ್ಲ . ನಾನು ರಾಮಭಕ್ತನಾಗಿದ್ದೇನೆ. ರಾಮಮಂದಿರ ನಿರ್ಮಾಣಕ್ಕಾಗಿ ಇತರರ ಜೊತೆ ನಾನೂ ಹೋರಾಡಿದ್ದೇನೆ ಎಂದು ಖಾನ್ ಹೇಳಿದ್ದಾರೆ.
ಹಿಂದುಗಳ ಆರಾಧ್ಯ ದೈವ ಭಗವಾನ್ ಶ್ರೀರಾಮನ ಭವ್ಯ ಮಂದಿರ ಭೂಮಿ ಪೂಜೆಯಂತಹ ಅದ್ಭುತ ಸಮಾರಂಭಕ್ಕೆ ನಾನು ಕೂಡಾ ಸಾಕ್ಷಿಯಾಗಲು ಹಂಬಲಿಸುತ್ತೇನೆ ಎಂದು ಅಜಮ್ ಖಾನ್ ಹೇಳಿದ್ದಾರೆ.