ನೋಯ್ಡಾ, ಜು 26 (Daijiworld News/MSP): ಪತ್ನಿಯೊಂದಿಗೆ ಜಗಳವಾಡುವ ಸಂದರ್ಭ 14 ತಿಂಗಳ ಮಗುವನ್ನು ಎತ್ತಿ ನೆಲಕ್ಕೆ ಎಸೆದು ಕೊಂದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.
ಕೂಲಿಕಾರ್ಮಿಕನಾಗಿದ್ದ ಜಮ್ಶೆಡ್ (28) ಬಿಹಾರ ಮೂಲದವನಾಗಿದ್ದು ಈತ ಪತ್ನಿ (23) ಹಾಗೂ ಹೆಣ್ಣು ಮಗುವೊಂದಿಗೆ ನೋಯ್ಡಾದ ಸೆಕ್ಟರ್ 22 ರ ಜೆಜೆ ಕಾಲೋನಿಯಲ್ಲಿ ವಾಸಿಸುತ್ತಿದ್ದ.
"ಗುರುವಾರ ಮಧ್ಯಾಹ್ನದ ವೇಳೆಗೆ ಈ ದಂಪತಿಗಳು ಕ್ಷುಲಕ ಕಾರಣಕ್ಕೆ ಜಗಳವಾಡಿದ್ದು, ವಾಗ್ವಾದ ಸಂದರ್ಭ ಅಂಬೆಗಾಲಿಡುತ್ತಿದ್ದ 1 ವರ್ಷ 2 ತಿಂಗಳ ತನ್ನ ಮಗುವನ್ನು ಎತ್ತಿ ಪತ್ನಿಯ ಮೇಲೆ ಜಮ್ಶೆಡ್ ಎಸೆದಿದ್ದು, ಈ ವೇಳೆ ಮಗು ತಪ್ಪಿ ನೆಲಕ್ಕೆ ಬಿದ್ದು ಗಂಭೀರ ಗಾಯಗಳಾಗಿದೆ. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಗು ದಾರಿ ಮಧ್ಯೆ ಮೃತಪಟ್ಟಿದೆ" ಎಂದು ಪೊಲೀಸ್ ಅಧಿಕಾರಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ.
ಮಗುವಿನ ತಾಯಿ ಸೆಕ್ಟರ್ 24 ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು , ಭಾರತೀಯ ದಂಡ ಸಂಹಿತೆ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತಂದೆಯನ್ನು ಬಂಧಿಸಲಾಗಿದೆ ಎಂದು ಅವರು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.