ನವದೆಹಲಿ, ಜು. 26 (DaijiworldNews/MB) : ಕಾರ್ಗಿಲ್ ವಿಜಯ ದಿವಸಕ್ಕೆ ಜುಲೈ 26 ರ ಭಾನುವಾರ 21ನೇ ವರ್ಷವಾಗಿದ್ದು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರ ಯೋಧರನ್ನು ನೆನೆಯುವ ದಿನವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ''ಈ ಕಾರ್ಗಿಲ್ ವಿಜಯ ದಿನದಂದು, 1999 ರಲ್ಲಿ ನಮ್ಮ ರಾಷ್ಟ್ರವನ್ನು ಸ್ಥಿರವಾಗಿ ರಕ್ಷಿಸಿದ ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಮತ್ತು ದೃಢತೆಯನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅವರ ಶೌರ್ಯವು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ'' ಎಂದು ಹೇಳಿದ್ದಾರೆ. ಹಾಗೆಯೇ ಈ ಬಗ್ಗೆ ಇಂದು ನಡೆಯುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡುವುದಾಗಿಯೂ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಗೃಹ ಸಚಿವ ಅಮಿತ್ ಶಾ ಅವರು, ''ಕಾರ್ಗಿಲ್ ವಿಜಯ ದಿನವು ಭಾರತದ ಸ್ವಾಭಿಮಾನ, ಅದ್ಭುತ ಶೌರ್ಯ ಮತ್ತು ಅಚಲ ನಾಯಕತ್ವದ ಸಂಕೇತವಾಗಿದೆ. ಈ ಯೋಧರಿಗೆ ನಾನು ನಮಸ್ಕರಿಸುತ್ತೇನೆ, ಅವರ ಅದಮ್ಯ ಧೈರ್ಯದಿಂದ, ಕಾರ್ಗಿಲ್ನಲ್ಲಿ ಅಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಮಾತೃಭೂಮಿಯನ್ನು ರಕ್ಷಿಸಲು ಮೀಸಲಾಗಿರುವ ಭಾರತದ ವೀರರ ಬಗ್ಗೆ ದೇಶ ಹೆಮ್ಮೆಪಡುತ್ತದೆ'' ಎಂದು ಹೇಳಿದ್ದಾರೆ.
''ಕಾರ್ಗಿಲ್ ವಿಜಯ್ ಅವರ 21 ನೇ ವಾರ್ಷಿಕೋತ್ಸವದಂದು, ಇತ್ತೀಚಿನ ಇತಿಹಾಸದಲ್ಲಿ ಜಗತ್ತು ಸಾಕ್ಷಿಯಾದ ಅತ್ಯಂತ ಸವಾಲಿನ ಪರಿಸ್ಥಿತಿಗಳಲ್ಲಿ ಶತ್ರುಗಳ ವಿರುದ್ಧ ಹೋರಾಡಿದ ಭಾರತೀಯ ಸಶಸ್ತ್ರ ಪಡೆಗಳ ಕೆಚ್ಚೆದೆಯ ಸೈನಿಕರಿಗೆ ನಮಸ್ಕರಿಸಲು ನಾನು ಬಯಸುತ್ತೇನೆ'' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
1999ರಲ್ಲಿ ಪಾಕಿಸ್ತಾನ ಸೇನೆಯು ಕಾರ್ಗಿಲ್-ಡ್ರಾಸ್ ವಲಯದಲ್ಲಿ ಅಕ್ರಮವಾಗಿ ನುಗ್ಗಿ ಭಾರತದ ಪ್ರಾಂತ್ಯಗಳನ್ನು ವಶಕ್ಕೆ ಪಡೆದಿತ್ತು. ಈ ಸಂದರ್ಭದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಲು ಬಂದ ಪಾಕ್ ಸೇನೆಯ ವಿರುದ್ಧ ಮೇ ಯಿಂದ ಆರಂಭವಾಗಿ ಎರಡೂವರೆ ತಿಂಗಳ ಕಾಲ ಕಾರ್ಗಿಲ್ನಲ್ಲಿ ಯುದ್ಧ ನಡೆದಿದ್ದು ಜುಲೈ 29, 1999ರಂದು ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ಈ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರನ್ನು ನೆನೆಯಲು ಪ್ರತಿವರ್ಷ ಜುಲೈ 26ನ್ನು ಕಾರ್ಗಿಲ್ ವಿಜಯ ದಿನವಾಗಿ ಆಚರಿಸಲಾಗುತ್ತಿದೆ.