ನವದೆಹಲಿ, ಜು. 26 (DaijiworldNews/MB) : ಪ್ರಜಾಪ್ರಭುತ್ವದ ರಕ್ಷಣೆಗಾಗಿ ಒಂದಾಗಿ ಎಂದು ದೇಶದ ಜನರಿಗೆ ಕರೆ ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಜಾಪ್ರಭುತ್ವಕ್ಕಾಗಿ ಮಾತನಾಡಿ #SpeakUpForDemocracy ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು, #SpeakUpForDemocracy ನಲ್ಲಿ ನಾವು ಒಂದಾಗೋಣ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ನಮ್ಮ ಧ್ವನಿಯನ್ನು ಹೆಚ್ಚಿಸೋಣ ಎಂದು ಜನರಿಗೆ ಮನವಿ ಮಾಡಿದ್ದಾರೆ.
ವಿಡಿಯೋದಲ್ಲಿ, ಇಂದು ದೇಶವು ಕೊರೊನಾದ ವಿರುದ್ಧ ಹೋರಾಡುತ್ತಿದೆ. ಆದರೆ ಬಿಜೆಪಿ ಈ ಸಂದರ್ಭದಲ್ಲಿ ಬಿಜೆಪಿ ಸಂವಿಧಾನವನ್ನು ನಾಶ ಮಾಡುತ್ತಿದೆ. 2018ರಲ್ಲಿ ರಾಜಸ್ಥಾನದ ಜನರು ಕಾಂಗ್ರೆಸ್ ಸರ್ಕಾರವನ್ನು ಚುನಾಯಿಸಿತ್ತು. ಇದೀಗ ಬಿಜೆಪಿಯು ರಾಜಸ್ತಾನದಲ್ಲಿ ಸರ್ಕಾರ ಕೆಡವಲು ಸಂಚು ಹೂಡಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಡವಿದ ಬಳಿಕ ಈಗ ರಾಜಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಕೊಲ್ಲುವ ಸಂಚು ಹೂಡಿದೆ ಎಂದು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.
ಹಾಗೆಯೇ ಇದರ ವಿರುದ್ಧವಾಗಿ #SpeakUpForDemocracy ಪ್ರಜಾಪ್ರಭುತ್ವಕ್ಕಾಗಿ ಮಾತನಾಡಿ ಅಭಿಯಾನವನ್ನು ಆರಂಭಿಸುತ್ತಿದ್ದು ನೀವು ಕೂಡಾ ಈ ಅಭಿಯಾನದಲ್ಲಿ ಕೈಜೋಡಿಸಿ ಎಂದು ಮನವಿ ಮಾಡಲಾಗಿದೆ.