ನವದೆಹಲಿ, ಜು 26 (Daijiworld News/MSP): "ನಿರಂತರವಾಗಿ ದೇಶವನ್ನು ಲೂಟಿ ಮಾಡುತ್ತಾ ಬಂದವರಿಗೆ ಮಾತ್ರ ಸಬ್ಸಿಡಿಯನ್ನು ಕೂಡಾ ಲಾಭ ಎಂದು ಕರೆಯಲು ಸಾಧ್ಯ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿರುಗೇಟು ನೀಡಿದ್ದಾರೆ.
"ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಶ್ರಮಿಕ್ ವಿಶೇಷ ರೈಲುಗಳ ಮೂಲಕ ಕೇಂದ್ರ ಸರ್ಕಾರಕ್ಕೆ 428 ಕೋಟಿ ಆದಾಯ ದೊರಕಿದೆ" ಎಂಬ ವರದಿಯನ್ನು ಉಲ್ಲೇಖಿಸಿದ ರಾಹುಲ್ ಬಡವರಿಗೆ ಸೌಕರ್ಯ ಕಲ್ಪಿಸಲು ಹಣ ಪಡೆಯುವ ಮೂಲಕ ಸರ್ಕಾರ ಭರ್ಜರಿ ಲಾಭ ಮಾಡಿಕೊಂಡಿದೆ. ತನ್ಮೂಲಕ ಅದು ಬಡವರ ವಿರೋಧಿ ನೀತಿ ಅನುಸರಿಸಿದೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ದ ಹಾರಿಹಾಯ್ದಿದ್ದರು.
ಇದಕ್ಕೆ ತಿರುಗೇಟು ನೀಡಿದ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ " ಶ್ರಮಿಕ್ ವಿಶೇಷ ರೈಲುಗಳಿಗಾಗಿ ರೈಲ್ವೆ ಇಲಾಖೆ ಒಟ್ಟು 2,145 ಕೋಟಿ ರೂ. ವೆಚ್ಚ ಮಾಡಿದ್ದು, ಈ ಪೈಕಿ 429 ಕೋಟಿ ರೂ. ಗಳು ಮಾತ್ರ ಮರಳಿ ಬಂದಿದೆ. ಇದನ್ನು ರಾಹುಲ್ ಹೇಗೆ ಲಾಭ ಎಂದು ಕರೆಯುತ್ತಾರೋ ತಿಳಿಯದಾಗಿದೆ. ಅಂದು ಶ್ರಮಿಕ್ ರೈಲಿನಲ್ಲಿ ಪ್ರಯಾಣಿಸುವ ವಲಸೆ ಕಾರ್ಮಿಕರ ಟಿಕೆಟ್ ಹಣವನ್ನು ನಾವು ಭರಿಸುತ್ತೇವೆ ಎಂದು ಸೋನಿಯಾ ಗಾಂಧಿ ಅವರ ಹೇಳಿದ ಮಾತು ಏನಾಯ್ತು ಎಂದು ಜನ ಪ್ರಶ್ನಿಸುತ್ತಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ಸಾಂಕ್ರಮಿಕ ರೋಗ ಸೃಷ್ಟಿಸಿರುವ ಸಂದಿಗ್ದ ಪರಿಸ್ಥಿತಿಯಲ್ಲೂ ವಲಸೆ ಕಾರ್ಮಿಕ ಸಹೋದರರು ಹಾಗೂ ಅವರ ಕುಟುಂಬವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ತೃಪ್ತಿ ರೈಲು ಇಲಾಖೆಗಿದೆ ಎಂದು ಇದೇ ವೇಳೆ ಗೋಯಲ್ ನುಡಿದ್ದಾರೆ.