ಬೆಂಗಳೂರು, ಜು. 26 (DaijiworldNews/MB) : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಯಾವುದೇ ಸವಾಲುಗಳು ಇರಲಿಲ್ಲ. ಅವರು ಸವಾಲುಗಳು ಇಲ್ಲದ ಸರ್ಕಾರ ನಡೆಸಿದ್ದರು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ 1 ವರ್ಷ ತುಂಬಿದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿ, ''ಸಿಎಂ ಬಿಎಸ್ವೈ ಆಡಳಿತದ ಬ್ಗಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಯಾವುದೇ ಸವಾಲುಗಳು ಇರಲಿಲ್ಲ. ಆದರೆ ಬಿಎಸ್ವೈ ಅಧಿಕಾರವಧಿಯಲ್ಲಿ ನಿರಂತರವಾಗಿ ಸವಾಲುಗಳು ಎದುರಾಗುತ್ತಿದೆ'' ಎಂದು ಅಭಿಪ್ರಾಯಪಟ್ಟ ಅವರು, ಆದರೆ ಈ ಇಳಿ ವಯಸ್ಸಿನಲ್ಲೂ ಬಿಎಸ್ವೈ ಅವರು ರಾಜ್ಯದಲ್ಲಿ ನಿರಂತರವಾಗಿ ಎದುರಾಗುತ್ತಿರುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತಿದ್ದಾರೆ'' ಎಂದು ಹೇಳಿದ್ದಾರೆ.
''ಕಾಂಗ್ರೆಸ್ - ಜೆಡಿಎಸ್ ಸರ್ಕಾರ ಪತನವಾಗಿ ಬಿಜೆಪಿ ಆಡಳಿತ ಬಂದು ಮಂತ್ರಿ ಮಂಡಲ ರಚನೆಯಾಗಿರದ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರವಾಹ ಉಂಟಾಗಿದ್ದು ಈ ವೇಳೆ ಬಿಎಸ್ವೈ ಒಬ್ಬರೇ ಎಲ್ಲಾ ಕಡೆಗಳಿಗೆ ಓಡಾಟ ನಡೆಸಿ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ನೆರೆಯಿಂದ ಮನೆ, ಆಸ್ತಿ ಪಾಸ್ತಿ ಕಳೆದುಕೊಂಡು ಕಂಗಲಾಗಿದ್ದ ಜನರಿಗೆ ಮನೆ ಕಟ್ಟಲು 5 ಲಕ್ಷ ರೂಪಾಯಿ ನೀಡಿದರು. ಪ್ರಸ್ತುತ ಕೊರೊನಾ ಸವಾಲು ಎದುರಾಗಿದ್ದು ಬಿಎಸ್ವೈ ಈ ಸಂದರ್ಭದಲ್ಲೂ ಜನರ ಮಧ್ಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೇರೆ ರಾಜ್ಯದ ಮುಖ್ಯಮಂತ್ರಿಗಳು ಹೊರಗೆ ಬರುತ್ತಿಲ್ಲ. ಆದರೆ ಸಿಎಂ ಬಿಎಸ್ವೈ ಈ ವಯಸ್ಸಿನಲ್ಲೂ ನಿವಾಸದಿಂದ ಹೊರ ಬರುತ್ತಾರೆ. ಸಭೆ ನಡೆಸುತ್ತಾರೆ. ಕೊರೊನಾ ನಿಯಂತ್ರಣಕ್ಕಾಗಿ ಪರಿಶ್ರಮ ಪಡುತ್ತಿದ್ದಾರೆ'' ಎಂದು ಬಿಎಸ್ವೈನ್ನು ಹಾಡಿ ಹೊಗಳಿದರು.