ಮಧ್ಯಪ್ರದೇಶ, ಜು 26 (DaijiworldNews/PY): ಪ್ರತಿದಿನ ಐದು ಬಾರಿ ಹನುಮಾನ್ ಚಾಲಿಸವನ್ನು ಪಠಿಸಿ, ಇದರಿಂದ ಕೊರೊನಾ ವೈರಸ್ ಅನ್ನು ತೊಡೆದು ಹಾಕಬಹುದು ಎಂದು ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾವೆಲ್ಲರೂ ಜನರ ಆರೋಗ್ಯದ ನಿಟ್ಟಿನಲ್ಲಿ ಒಂದುಗೂಡಿ ಆಧ್ಯಾತ್ನಿಕದ ಪ್ರಯತ್ನ ಮಾಡೋಣ. ಇದರಿಂದ ಕೊರೊನಾ ವೈರಸ್ ಎನ್ನುವ ಸಾಂಕ್ರಾಮಿಕವನ್ನು ತೊಡೆದು ಹಾಕೋಣ. ಇದರ ಸಲುವಾಗಿ ಜು 25 ರಿಂದ ಆಗಸ್ಟ್ 5ರವರೆಗೆ ಮನೆಯಲ್ಲಿ ಪ್ರತಿದಿನ ಐದು ಬಾರಿ ಹನುಮಾನ್ ಚಾಲಿಸ ಪಠಣ ಮಾಡಿ. ಅಲ್ಲದೇ, ಆಗಸ್ಟ್ 5ರಂದು ದೀಪಗಳನ್ನು ಬೆಳಗಿ, ಭಗವಂತ ರಾಮನಿಗೆ ಆರತಿ ಬೆಳಗಿ ಈ ಆಚರಣೆಯನ್ನು ಮುಕ್ತಾಯಗೊಳಿಸಿ ಎಂದು ಹೇಳಿದ್ದಾರೆ.
ಟ್ವೀಟ್ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಆಗಸ್ಟ್ 4 ರವರೆಗೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಭೋಪಾಲ್ನಲ್ಲಿ ಲಾಕ್ಡೌನ್ ಜಾರಿ ಮಾಡಲಿದೆ. ಲಾಕ್ಡೌನ್ ಆಗಸ್ಟ್ 4ರಂದು ಮುಗಿಯಲಿದ್ದು, ಆಗಸ್ಟ್ 5ರಂದು ಹನುಮಾನ್ ಚಾಲಿಸ ಕೊನೆಗೊಳ್ಳುತ್ತದೆ. ಆ.5ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕಾಗಿ ಭೂಮಿ ಪೂಜೆಯು ನೆರವೇರಲಿದ್ದು, ಭೂಮಿ ಪೂಜೆಯ ದಿನವನ್ನು ನಾವು ದೀಪಾವಳಿಯ ರೀತಿಯಲ್ಲಿ ಆಚರಣೆ ಮಾಡೋಣ ಎಂದಿದ್ದಾರೆ.
ಒಂದೇ ಬಾರಿಗೆ ಜನರು, ದೇಶದ ಹಿಂದೂಗಳು ಹನುಮಾನ್ ಚಾಲಿಸವನ್ನು ಪಠಣ ಮಾಡುವುದರಿಂದ ಅದು ಖಂಡಿತವಾಗಿಯೂ ಸಫಲವಾಗುತ್ತದೆ ಎಂದು ತಿಳಿಸಿದ್ದಾರೆ.