ಮುಂಬೈ, ಜು. 26 (DaijiworldNews/MB) : ವಿರೋಧ ಪಕ್ಷಗಳು ಸರ್ಕಾರ ಉಳಿಸುವ ಯತ್ನದಲ್ಲಿದ್ದಾರೆ. ಆದರೆ ಅವರು ಸಫಲವಾಗುವುದಿಲ್ಲ. ಈ ಮೂರು ಚಕ್ರದ ಸರ್ಕಾರದ ಸ್ಟೀರಿಂಗ್ ನನ್ನ ಕೈಯಲ್ಲಿ ಭದ್ರವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ಎನ್ಸಿಪಿ, ಕಾಂಗ್ರೆಸ್, ಶಿವಸೇನೆ ಒಟ್ಟಾಗಿ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರ ಭದ್ರವಾಗಿದ್ದು ಈ ಮೈತ್ರಿಯನ್ನು ಮುರಿದು ಬೀಳಿಸಲು ಸಾಧ್ಯವೇ ಇಲ್ಲ. ಸರ್ಕಾರವನ್ನು ಉರುಳಿಸುವ ಕನಸನ್ನು ಮಾತ್ರ ವಿಪಕ್ಷ ಕಾಣಬಹುದು. ವಿರೋಧ ಪಕ್ಷದ ಕೈಯಲಿಲ್ಲ ನಮ್ಮ ಪಕ್ಷದ ಮುಂದಿನ ಭವಿಷ್ಯ. ಈ ಮೂರು ಚಕ್ರವಿರುವ ಆಟೋ ರಿಕ್ಷಾ ಬಡವರ ವಾಹನವಾಗಿದ್ದು ಇಬ್ಬರು ಹಿಂದೆ ಕುಳಿತಿರುತ್ತಾರೆ. ಒಬ್ಬ ಮುಂದೆ ಕೂತು ಗಾಡಿ ಓಡಿಸುತ್ತಾನೆ. ನಮ್ಮ ಸರ್ಕಾರವು ಕೂಡಾ ಹೀಗೆ, ಸ್ಟೀರಿಂಗ್ ನನ್ನ ಕೈಯಲ್ಲಿದೆ ಎಂದು ಹೇಳಿದ್ದಾರೆ.
ಇನ್ನು ಸರ್ಕಾರವನ್ನು ನೀವು ಕೆಡವಲು ಬಯಸುವುದಾದರೆ, ಸೆಪ್ಟೆಂಬರ್-ಅಕ್ಟೋಬರ್ವರೆಗೆ ಯಾಕಾಗಿ ಕಾಯಬೇಕು. ಈಗಲೇ ಉರುಳಿಸಿ ಎಂದು ವಿಪಕ್ಷ ಬಿಜೆಪಿಗೆ ಸವಾಲೆಸೆದ ಅವರು, ಕೆಲವರು ಕಟ್ಟುವುದರಲ್ಲಿ ಖುಷಿ ಪಟ್ಟರೆ ಕೆಲವರು ಕೆಡವುದರಲ್ಲೇ ಖುಷಿ ಕಾಣುತ್ತಾರೆ. ನಾಶ ಮಾಡುವುದರಲ್ಲೇ ನಿಮ್ಮ ಸಂತೋಷವಾದ್ದಲ್ಲಿ ಅದನ್ನೇ ಮಾಡಿ. ಆದರೆ ಸರ್ಕಾರವನ್ನು ಉರುಳಿಸುವುದು ಪ್ರಜಾಪ್ರಭುತ್ವವಾಗುತ್ತದೆಯೇ ಎಂದು ವಿಪಕ್ಷವನ್ನು ಪ್ರಶ್ನಿಸಿದರು.
ಹಾಗೆಯೇ ಕೊರೊನಾದ ಈ ಸಂದರ್ಭದಲ್ಲಿ ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಸುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊರೊನಾ ದೇಶದಲ್ಲಿ ಕಾಣಿಸಿಕೊಂಡ ಆರಂಭದಲ್ಲಿ ತಾವು ಮುಖ್ಯಮಂತ್ರಿಯಾಗಿ 100 ದಿನಗಳಾಗಿದ್ದಕ್ಕೆ ವಿಶೇಷ ಪೂಜೆ ಸಲ್ಲಿಸಲೆಂದು ಅಯೋಧ್ಯೆಗೆ ಹೋಗಿದ್ದ ಸಂದರ್ಭದಲ್ಲಿ ಸರಯೂ ನದಿಯಲ್ಲಿ ಆರತಿ ಮಾಡುವುದಕ್ಕೆ ಉದ್ಧವ್ ಠಾಕ್ರೆಯವರನ್ನು ತಡೆಯಲಾಗಿದ್ದು ಇದನ್ನು ನೆನಪಿಸಿಕೊಂಡ ಅವರು, ನಾನು ಕೂಡಾ ಅಯೋಧ್ಯೆಗೆ ಹೋಗಬಹುದು ಆದರೆ ಅಲ್ಲಿರುವ ಲಕ್ಷಾಂತರ ರಾಮ ಭಕ್ತರು ನನ್ನನ್ನು ತಡೆದರೆ ಏನು ಮಾಡುವುದು ಎಂದು ಪ್ರಶ್ನಿಸಿದರು.