ಹೈದರಾಬಾದ್, ಜು. 26 (DaijiworldNews/MB) : ಕೊರೊನಾ ವೈರಸ್ಗೆ ಚಿಕಿತ್ಸೆ ನೀಡುತ್ತೇನೆ ಎಂದು ಹೇಳಿಕೊಂಡು ಜನರಿಂದ ಸುಲಿಗೆ ಮಾಡುತ್ತಿದ್ದ ಆರೋಪದಲ್ಲಿ 50 ವರ್ಷದ ದೇವಮಾನವ ಮತ್ತು ಆತನ ಸಹಚರನನ್ನು ಹೈದರಾಬಾದ್ನಲ್ಲಿ ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಕೊರೊನಾ ಬಾಬಾ ಎಂಬ ಹೆಸರು ಇರಿಸಿಕೊಂಡಿರುವ ಎಂಡಿ ಇಸ್ಮಾಯಿಲ್ ಮತ್ತು ಆತನ ಸಹವರ್ತಿ ಎಂಡಿ ಸಲೀಂನ್ನು ಸೈಬರಾಬಾದ್ ಪೊಲೀಸರು ಶನಿವಾರ ಬಂಧಿಸಿ ಸಾಂಕ್ರಾಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಹಫೀಜ್ಪೇಟ್ ಎಂಬ ಪ್ರದೇಶದಲ್ಲಿ ಕೊರೊನಾಗೆ ಔಷಧಿ ನೀಡುವುದಾಗಿ ಹೇಳಿ ಜನರಿಗೆ ಕೊರೊನಾ ಬಾಬಾ ಎಂದು ಹೇಳಿಕೊಂಡು ಮೋಸ ಮಾಡುತ್ತಿದ್ದವರನ್ನು ಬಂಧಿಸಲಾಗಿದ್ದು ಈಗ ಇಬ್ಬರು ಸಂತ್ರಸ್ತರು ತಮ್ಮ ಹೇಳಿಕೆಗಳನ್ನು ನೀಡಲು ಮುಂದೆ ಬಂದಿದ್ದಾರೆ ಎಂದು ಮಿಯಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್.ವೆಂಕಟೇಶ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳು ಹಫೀಜ್ಪೇಟೆಯ ಮಾರ್ಥಂಡಾ ನಗರದ ನಿವಾಸಿಗಳಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ವಿಶೇಷ ಪ್ರಾರ್ಥನೆಯ ಮೂಲಕ ಜ್ವರವನ್ನು ಕಡಿಮೆ ಮಾಡಬಹುದು ಎಂದು ಹೇಳೀಕೊಂಡಿದ್ದು ಈಗ ಕೊರೊನಾ ಸೋಂಕಿಗೂ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಆತನ ಉಪದೇಶಗಳು ಸ್ಥಳೀಯ ವಾಟ್ಸಾಪ್ ಗುಂಪುಗಳಲ್ಲಿ ಸಹ ಲಭ್ಯವಿವೆ.
ಕಳೆದ ಕೆಲವು ತಿಂಗಳುಗಳಲ್ಲಿ ಜನರಲ್ಲಿರುವ ಆತಂಕವನ್ನೇ ಅಸ್ತ್ರವನ್ನಾಗಿಸಿಕೊಂಡು 12,000 ರಿಂದ 30,000 ರೂ.ಗಳವರೆಗೆ ವಸೂಲಿ ಮಾಡುತ್ತಿದ್ದರು ಎಂದು ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಸದ್ಯ ಇಬ್ಬರು ಸಂತ್ರಸ್ತರು ಈ ಕೊರೊನಾ ಬಾಬಾನ ವಿರುದ್ಧ ತಮ್ಮ ಹೇಳಿಕೆಗಳನ್ನು ನೀಡಿದ್ದು ಈತನ ಬಂಧನದ ಬಳಿಕ ಇನ್ನೂ ಅಧಿಕ ಸಂತ್ರಸ್ಥರು ತಮ್ಮನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದು ಈ ಆರೋಪಿಗಳ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾರು ಕೂಡಾ ಈ ರೀತಿಯಾಗಿ ಇಂತಹ ಸುಳ್ಳು ಬಾಬಾಗಳನ್ನು ನಂಬಬೇಡಿ, ಕೊರೊನಾ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆಯನ್ನು ಪಡಯಿರಿ ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.