ಮುಂಬೈ, ಜು 26 (Daijiworld News/MSP): ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ಹಿರಿಯ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಅವರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಮಧ್ಯಾಹ್ನ 12 ಗಂಟೆಗೆ ಬಾಂದ್ರಾ ಪೊಲೀಸ್ ಠಾಣೆಗೆ ಬರಲು ಮಹೇಶ್ ಭಟ್ ಅವರಿಗೆ ಸೂಚಿಸಲಾಗಿದ್ದು ಆ ಬಳಿಕ ವಿಚಾರಣೆ ಆರಂಭವಾಗಲಿದೆ.
ಇದಲ್ಲದೆ ನಿರ್ದೇಶಕ ಕರಣ್ ಜೋಹರ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದ್ದು ಈಗಾಗಲೇ ಇವರ ಮ್ಯಾನೇಜರ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಮುಂಬೈ ಪೊಲೀಸ್ ಮೂಲಗಳು ಹೇಳಿವೆ.
ಬಾಲಿವುಡ್ ಚಿತ್ರರಂಗದಲ್ಲಿ ಅವಕಾಶ ಪಡೆಯಲು ಕೆಲವರ ಕೃಪೆ ಅನಿವಾರ್ಯವಾಗಿದ್ದು ತಮ್ಮ ಹಿಡಿತದಲ್ಲಿ ಚಿತ್ರರಂಗ ಇಟ್ಟುಕೊಂಡಿರುವ ಅನೇಕರು ಅವಕಾಶ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದ ಖ್ಯಾತ ನಟಿ ಕಂಗನಾ ರಣಾವತ್, ಮಹೇಶ್ ಭಟ್ ಮತ್ತು ಕರಣ್ ಜೋಹರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಇದರ ಬೆನ್ನಲ್ಲೇ ಮಹೇಶ್ ಭಟ್ ಅವರಿಗೆ ನೋಟಿಸ್ ನೀಡಿರುವುದು ಕುತೂಹಲಕಾರಿಯಾಗಿದೆ.
ಹಣಕಾಸು ವ್ಯವಹಾರ ಹಾಗೂ ಹೊರಗಿನಿಂದ ಬರುವ ಪ್ರತಿಭೆಗಳನ್ನು ಹೊಸಕಿ ಹಾಕುವ ಕೆಟ್ಟ ಸಂಪ್ರದಾಯ ಮತ್ತು ಕೆಟ್ಟ ಶಕ್ತಿ ಬಾಲಿವುಡ್ ನಲ್ಲಿ ಇದೆಯೇ ಎನ್ನುವ ಅಯಾಮದಲ್ಲೂ ತನಿಖೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.