ಬೆಂಗಳೂರು, ಜು. 26 (DaijiworldNews/MB) : ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನ ಒಂದು ವರ್ಷದ ಆಡಳಿತ ಪೂರ್ಣಗೊಂಡಿರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಜುಲೈ 27 ಸೋಮವಾರ ಬಿಜೆಪಿ ಸರ್ಕಾರದ ಸಾಧನೆಗಳನ್ನು ಆನ್ಲೈನ್ ಮೂಲಕ ತಿಳಿಸಲಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿರುವ ಅವರು, ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ, ಇದೇ ಸೋಮವಾರ, ಜುಲೈ27ರಂದು, ಬೆಳಗ್ಗೆ 11ಗಂಟೆಯಿಂದ ನಡೆಯುವ ಸರಳ ಆನ್ ಲೈನ್ ಸಮಾರಂಭದ ಮೂಲಕ ನನ್ನ ಸರ್ಕಾರದ ಕಾರ್ಯನಿರ್ವಹಣಾ ವರದಿಯನ್ನು ರಾಜ್ಯದ ಜನತೆಗೆ ಸಲ್ಲಿಸಲಾಗುವುದು. ಕಾರ್ಯಕ್ರಮದ ನೇರಪ್ರಸಾರವಿರಲಿದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರು ಜುಲೈ 26, 2019 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಿ ವಹಿಸಿಕೊಂಡಿದ್ದಾರೆ. ಇಂದಿಗೆ ಬಿಜೆಪಿ ಸರ್ಕಾರ ಒಂದು ವರ್ಷವನ್ನು ಪೂರೈಸಿದ್ದು ಯಡಿಯೂರಪ್ಪ ಅವರು ಆಗಸ್ಟ್ 1 ರಂದು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಡಿಜಿಟಲ್ ರ್ಯಾಲಿ ನಡೆಸಲಿದ್ದಾರೆ.
ಅಧಿಕಾರಕ್ಕೆ ಮರಳಿದ ಒಂದು ವರ್ಷದ ಆಡಳಿತ ಪೂರೈಸಿದ ನಿಟ್ಟಿನಲ್ಲಿ ಸರಣಿ ಕಾರ್ಯಕ್ರಮಗಳನ್ನು ಸೋಮವಾರ ಪ್ರಾರಂಭಿಸಲಾಗುವುದು. ಯಡಿಯೂರಪ್ಪ ಅವರು ಸೋಮವಾರ ವಿಧಾನ ಸೌಧದಲ್ಲಿ ಸರ್ಕಾರದ ಸಾಧನೆಗಳ ಕಿರುಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ ನಾರಾಯಣ್ ಈ ಹಿಂದೆ ತಿಳಿಸಿದ್ದಾರೆ.