ನವದೆಹಲಿ, ಜು. 27 (DaijiworldNews/MB) : ಸರ್ಕಾರಿ ಬಂಗಲೆ ಖಾಲಿಗೂ ಮುನ್ನ ಅಲ್ಲಿ ಇನ್ನು ಹೊಸದಾಗಿ ವಾಸವಾಗುವ ಬಿಜೆಪಿ ನಾಯಕ ಅನಿಲ್ ಬಲುನಿಯವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಚಹಾ ಸೇವನೆಗೆ ಕರೆದಿದ್ದಾರೆ.
ಪ್ರಿಯಾಂಕಾ ಅವರು ಆಗಸ್ಟ್ 1ರೊಳಗೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲಿದ್ದು ಇದಕ್ಕೂ ಮುನ್ನ ಅಲ್ಲಿ ಇನ್ನು ವಾಸವಾಗಲಿರುವ ಬಿಜೆಪಿ ನಾಯಕ ಅನಿಲ್ ಬಲುನಿ ಮತ್ತು ಅವರ ಪತ್ನಿಯನ್ನು ಚಹಾ ಸೇವನೆಗೆ ಆಹ್ವಾನಿಸಿದ್ದು ಇದಕ್ಕೆ ಅನಿಲ್ ಬಲುನಿ ಅವರ ಕಡೆಯಿಂದ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಾಗಿದೆ.
ಪ್ರಿಯಾಂಕಾ ಗಾಂಧಿ ಅವರು 1997ರಿಂದ ದೆಹಲಿಯ 35 ಲೋಧಿ ಎಸ್ಟೇಟ್ ಬಂಗಲೆಯಲ್ಲಿ ವಾಸವಾಗಿದ್ದು ಅವರಿಗೆ ಈವರೆಗೂ ನೀಡಲಾಗಿದ್ದು ವಿಶೇಷ ರಕ್ಷಣಾ ಗುಂಪು(ಎಸ್ ಪಿಜಿ) ಭದ್ರತೆಯನ್ನು ಗೃಹ ಸಚಿವಾಲಯ ಹಿಂಪಡೆದ ಬಳಿಕ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೊಟೀಸ್ ಜಾರಿ ಮಾಡಿತ್ತು. ಅವರ ಸರ್ಕಾರಿ ನಿವಾಸದ ಸೌಲಭ್ಯ ಜುಲೈ ಒಂದರಿಂದ ಕೊನೆಗೊಂಡಿದ್ದು ಆಗಸ್ಟ್ 1ರೊಳಗೆ ಮನೆ ಖಾಲಿ ಮಾಡಬೇಕೆಂದು ನೊಟೀಸ್ನಲ್ಲಿ ತಿಳಿಸಲಾಗಿತ್ತು.
ಇನ್ನು ಸದ್ಯ ಪ್ರಿಯಾಂಕಾ ಅವರು ಗುರುಗ್ರಾಮ್ನ ತಮ್ಮ ನಿವಾಸದಲ್ಲಿ ವಾಸಿಸುತ್ತಿದ್ದು ಬಳಿಕ ದೆಹಲಿಯಲ್ಲಿ ಮನೆ ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ.