ಬೆಂಗಳೂರು, ಜು 27 (DaijiworldNews/PY): ಉಭಯ ಸದನಗಳಲ್ಲಿ ಶಿಕ್ಷಕರ ವರ್ಗಾವಣೆಗೆ ಸಂಬಂಧಪಟ್ಟಂತೆ ಅಂಗೀಕಾರವಾದ ವರ್ಗಾವಣೆ ಕಾಯ್ದೆ 2020ಕ್ಕೆ ಅಂತಿಮ ನಿಯಮವನ್ನು ರೂಪಿಸಲಾಗಿದೆ.
ಸಾಂದರ್ಭಿಕ ಚಿತ್ರ
ಕೊರೊನಾ ಹಿನ್ನೆಲೆ ಸಾಮಾನ್ಯ ವರ್ಗಾವಣೆಗೆ ಅವಕಾಶವಿಲ್ಲದಿರುವ ಕಾರಣ ವರ್ಗಾವಣೆ ಪ್ರಕ್ರಿಯೆ ನಡೆಯುವಂಥ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಶಿಕ್ಷಕರನ್ನು ನಿಯೋಜನೆ ಮಾಡುವ ಉದ್ದೇಶದಿಂದ ಶೇ.25ಕ್ಕಿಂತ ಅಧಿಕ ಖಾಲಿ ಇರುವ ಹುದ್ದೆಗಳನ್ನು ಹೊಂದಿರುವಂತ ತಾಲೂಕಿನಲ್ಲಿ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗಿಲ್ಲ. ಅಲ್ಲದೇ, 50 ವರ್ಷ ಮೇಲ್ಪಟ್ಟ ಶಿಕ್ಷಕಿಯರು ಹಾಗೂ 55 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆ ಮಾಡಲು ಅವಕಾಶವಿಲ್ಲ ಎನ್ನಲಾಗಿದೆ. ಶಿಕ್ಷಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಥವಾ ಅನುದಾನಿತ ಸಂಸ್ಥೆಯ ನೌಕರರನ್ನು ವಿವಾಹವಾಗಿದ್ದಲ್ಲಿ, ಶಿಕ್ಷಕ, ಪತಿ-ಪತ್ನಿ ಮಾರಕ ಖಾಯಿಲೆ ಅಥವಾ ಗಂಭೀರವಾದ ಕಾಯಿಲೆಯಿಂದ ಬಳಲುತ್ತಿದ್ದು, ಅಥವಾ ಮಕ್ಕಳು ಸೇರಿದಂತೆ ಶೇ.40ಕ್ಕಿಂತ ಅಧಿಕ ಅಂಗವೈಕಲ್ಯ ಹೊಂದಿದಂತ ಶಿಕ್ಷಕರಿಗೆ ವರ್ಗಾವಣೆಯ ವಿನಾಯಿತಿ ಕಲ್ಪಿಸಲಾಗಿದೆ.
ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಅಥವಾ ಗರ್ಭಿಣಿ ಶಿಕ್ಷಕಿಯರಿಗೆ, ಭಾರತೀಯ ರಕ್ಷಣಾ ಪಡೆ, ಅರೆ ಸೇನಾ ಪಡೆಗಳ ಹಾಲಿ ಅಥವಾ ಮಾಜಿ ಯೋಧರ ಅಥವಾ ಮೃತ ಯೋಧರ ಪತ್ನಿ, ವಿಧವೆ ಅಥವಾ ವಿಧುರ ಶಿಕ್ಷಕರು ಮಕ್ಕಳೊಂದಿಗೆ ಇದ್ದರೆ, ವಿವಾಹ ವಿಚ್ಛೇದಿತ ಶಿಕ್ಷಕ ಅಥವಾ ಶಿಕ್ಷಕಿ ಅವಲಂಬಿತ ಮಕ್ಕಳೊಂದಿಗಿದ್ದರೆ, ಹಾಗೂ 50 ವರ್ಷದ ಶಿಕ್ಷಕಿ ಅಥವಾ 55 ವರ್ಷದ ಶಿಕ್ಷಕರಿಗೆ ವರ್ಗಾವಣೆಯ ವಿನಾಯಿತಿ ಇದೆ.
ಈವರೆಗೆ ಪರಸ್ಪರ ವರ್ಗಾವಣೆಯಲ್ಲಿದ್ದ ಮೂರು ವರ್ಷಗಳ ಅವಧಿಯನ್ನು 7 ವರ್ಷಕ್ಕೆ ಏರಿಸಲಾಗಿದೆ. ಸಾಮಾನ್ಯ ವರ್ಗಾವಣೆ ಮುಗಿದ ನಂತರ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಯಾವುದೇ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳದಿದ್ದಲ್ಲಿ, ವಿದ್ಯಾರ್ಥಿ ಶಿಕ್ಷಕರ ಅನುಪಾತ ಆಧಾರ ಹಾಗೂ ಸಾವರ್ವಜನಿಕ ಹಿತಾಸಕ್ತಿಯ ಆಧಾರದ ಪ್ರಕಾರ ಆಯ್ಕೆ ಮಾಡಲಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಅಧೀನ ಕಾರ್ಯದರ್ಶಿ, ಹೆಚ್ಚುವರಿ ಶಿಕ್ಷಕರಿಗಾಗಿ ಶಿಕ್ಷಕರ ವಿದ್ಯಾರ್ಥಿಯ ಅನುಪಾತದ ಅನ್ವಯ ಪರಿಗಣಿಸಬಹುದಾಗಿದೆ ಎಂದಿದ್ದಾರೆ.