ಜೈಪುರ, ಜು. 27 (DaijiworldNews/MB) : ರಾಜಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಮತ್ತೊಂದು ತಿರುವು ಪಡೆದಿದ್ದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಾದ್ದಲ್ಲಿ ಬಿಎಸ್ಪಿ ಶಾಸಕರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಬೇಕು ಎಂದು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ತನ್ನ ಆರು ಶಾಸಕರಿಗೆ ವಿಪ್ ಜಾರಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ, ಬಿಎಸ್ಪಿ ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷವಾಗಿದೆ. ಸಂವಿಧಾನದ ಪ್ರಕಾರ ರಾಜ್ಯದಲ್ಲಿ ಯಾವುದೇ ವಿಲೀನ ಸಾಧ್ಯವಿಲ್ಲ. ರಾಷ್ಟ್ರದೆಲ್ಲೆಡೆ ವಿಲೀನವಾಗದೆ ನಮ್ಮ ಆರು ಶಾಸಕರು ಬೇರೆ ಪಕ್ಷಗಳೊಂದಿಗೆ ವಿಲೀನಗೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಎಲ್ಲಾ ಆರು ಶಾಸಕರಿಗೆ ಪ್ರತ್ಯೇಕವಾಗಿ ನೋಟಿಸ್ ನೀಡಲಾಗಿದೆ. ಇದನ್ನು ಉಲ್ಲಂಘಿಸಿದ್ದಲ್ಲಿ ವಿಧಾನಸಭೆಯಿಂದ ಅನರ್ಹರಾಗುತ್ತಾರೆ ಎಂದು ತಿಳಿಸಿದ್ದಾರೆ.
ಸಂದೀಪ್ ಯಾದವ್, ವಾಜಿಬ್ ಅಲಿ, ದೀಪ್ಚಂದ್ ಖೇರಿಯಾ, ಲಖನ್ ಮೀನಾ, ಜೋಗೇಂದ್ರ ಅವನಾ ಮತ್ತು ರಾಜೇಂದ್ರ ಗುಧಾ ಎಂಬ ಆರು ಮಂದಿ ಶಾಸಕರು ಕಳೆದ ವರ್ಷ ಸೆಪ್ಟೆಂಬರ್ 16ರಂದು ಕಾಂಗ್ರೆಸ್ಗೆ ಸೇರಲು ಇಚ್ಛಿಸಿ ಸ್ಪೀಕರ್ಗೆ ವಿಲೀನ ಅರ್ಜಿ ಸಲ್ಲಿಸಿದ್ದು ಸ್ಪೀಕರ್ ಆರು ಮಂದಿಯೂ ಇನ್ನು ಮುಂದೆ ಕಾಂಗ್ರೆಸ್ನ ಶಾಸಕರು ಎಂದು ಘೋಷಿಸಿದ್ದರು. ಕಳೆದ ಶುಕ್ರವಾರ ಬಿಜೆಪಿಯ ಶಾಸಕರೊಬ್ಬರು ಕಾಂಗ್ರೆಸ್ನೊಂದಿಗಿನ ಬಿಎಸ್ಪಿಯ ವಿಲೀನವನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇದರ ಬೆನ್ನಲ್ಲೇ ಬಿಎಸ್ಪಿ ಈ ಆರು ಮಂದಿ ಶಾಸಕರಿಗೆ ವಿಪ್ ಜಾರಿ ಮಾಡಿದೆ.
ಈ ನಡುವೆ ಸಚಿನ್ ಪೈಲಟ್ ಸೇರಿದಂತೆ 19 ಮಂದಿ ಬಂಡಾಯ ಶಾಸಕರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅನರ್ಹತೆ ಪ್ರಶ್ನಿಸಿ ಅರ್ಜಿಯನ್ನು ಅನರ್ಹಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ವಿಧಾನಸಭೆ ಸ್ಪೀಕರ್ ಸಿ ಪಿ ಜೋಶಿ ಇಂದು ತಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ.