ಶ್ರೀನಗರ, ಜು. 27 (DaijiworldNews/MB) : ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೂ ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್ಸಿಪಿ ನಾಯಕ ಓಮರ್ ಅಬ್ದುಲ್ಲಾ ಪ್ರತಿಜ್ಞೆ ಮಾಡಿದ್ದಾರೆ.
ಹಲವು ವರ್ಷಗಳಿಂದ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದಆರ್ಟಿಕಲ್ 370ಯ ರದ್ದತಿ ಮಾಡಿ ಒಂದು ವರ್ಷಗಳು ಆಗಿರುವ ಕಾರಣದಿಂದ ಪತ್ರಿಕೆಯೊಂದರಲ್ಲಿ ಲೇಖನ ಬರೆದಿರುವ ಅವರು, ಆರ್ಟಿಕಲ್ 35A ಮೂಲಕ ಆರ್ಟಿಕಲ್ 370 ನ್ನು ಬಿಜೆಪಿ ಸರ್ಕಾರ ರದ್ದು ಮಾಡಿದ್ದು ಆಶ್ಚರ್ಯದ ವಿಚಾರವೇನು ಅಲ್ಲ. ಆದರೆ ರಾಜ್ಯವಾಗಿದ್ದ ಜಮ್ಮು-ಕಾಶ್ಮೀರವನ್ನು ಇಬ್ಭಾಗ ಮಾಡಿ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ್ದು ಆಘಾತಕಾರಿಯಾಗಿದ್ದು ಇದು ರಾಜ್ಯಕ್ಕೆ ಮಾಡಿದ ಅಪಮಾನ. ಜಮ್ಮು ಕಾಶ್ಮೀರದ ಜನರು ಇದಕ್ಕೆ ಸಮ್ಮತಿ ನೀಡಿರಲಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಸರ್ಕಾರ ರಾಜ್ಯದ ಜನರನ್ನು ಶಿಕ್ಷಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದು ಬೇರೆ ಯಾವ ಕಾರಣದಿಂದಲ್ಲೂ ಈ ರೀತಿ ಮಾಡಿಲ್ಲ. ಹೆಚ್ಚು ಅಧಿಕಾರ ಹೊಂದಿದ್ದ ಜಮ್ಮು-ಕಾಶ್ಮೀರದ ವಿಧಾನಸಭೆಗೆ ಸದಸ್ಯನಾಗಿದ್ದವನು ಈಗ ಅಧಿಕಾರವೇ ಇಲ್ಲದಂತಾಗಿರುವ ವಿಧಾನಸಭೆಗೆ ಸದಸ್ಯನಾಗುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜನರ ಬೇಡಿಕೆಯಂತೆ ಲಡಾಖ್ನ್ನು ಪ್ರತ್ಯೇಕಗೊಳಿಸಿದ್ದಾದರೆ ಜಮ್ಮುವಿನಲ್ಲೂ ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಇದೆ. ಧಾರ್ಮಿಕ ಕಾರಣದಿಂದ ಮಾಡಿರುವುದಾದರೆ ಮುಸ್ಲಿಮರೇ ಹೆಚ್ಚಾಗಿರುವ ಕಾರ್ಗಿಲ್ ಹಾಗೂ ಲೇಹ್ನ್ನು ಕೇಂದ್ರ ಕಡೆಗಣಿಸಿದಂತೆ ಎಂದು ಹೇಳಿದ್ದಾರೆ.