ಬೆಂಗಳೂರು, ಜು. 27 (DaijiworldNews/MB) : ''ರಾಜ್ಯದಲ್ಲಿ ಅಭಿವೃದ್ದಿಗೆ ಕೊರೊನಾ ಕಂಟಕವಾಗಿದೆ. ಕೊರೊನಾ ಸಮಸ್ಯೆ ಎದುರಾಗದಿದ್ದಲ್ಲಿ ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿಯಾಗುತ್ತಿತ್ತು'' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ಬಿಎಸ್ವೈ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ''ಜನರ ಆಶೀರ್ವಾದದಿಂದ ನಾನು ಒಂದು ವರ್ಷ ಆಡಳಿತ ನಡೆಸಲು ಸಾಧ್ಯವಾಗಿದೆ'' ಎಂದು ಹೇಳಿದರು.
''ರಾಜ್ಯದಲ್ಲಿ ಸುಭದ್ರ ಸರ್ಕಾರವಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ದಿ ಮಾಡುವುದು ನನ್ನ ಗುರಿ. ಕೊರೊನಾ ಇಲ್ಲದಿದ್ದಲ್ಲಿ ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧ್ಯವಾಗುತ್ತಿತ್ತು. ಆದರೆ ಈಗ ಅಭಿವೃದ್ದಿಗೆ ಕೊರೊನಾ ಅಡ್ಡಿಯಾಗಿದೆ. ಈಗ ಒಂದು ವರ್ಷ ಪೂರೈಸಿದ್ದೇನೆ. ಅದು ನಿಮ್ಮೆಲ್ಲರಾ ಆಶೀರ್ವಾದದಲ್ಲಿ ಇನ್ನುಳಿದ ಆಡಳಿತಾವಧಿ ಪೂರೈಸಲು ನಿಮ್ಮ ಸಹಕಾರ, ಆಶೀರ್ವಾದ ಅತೀ ಮುಖ್ಯ. ನಿಮ್ಮ ಸಹಕಾರದೊಂದಿಗೆ ರಾಜ್ಯದ ಅಭಿವೃದ್ದಿ ಮಾಡುತ್ತೇನೆ'' ಎಂದರು.
''ರೈತರು ಹಾಗೂ ನೇಕಾರರು ನನ್ನ ಎರಡು ಕಣ್ಣುಗಳಿದ್ದಂತೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ನೆಮ್ಮದಿಯಿಂದ ಬದುಕುವಂತೆ ಆಗಬೇಕು. ಬಡವರು ವಾಸವಾಗಲು ಮನೆಯಿಲ್ಲದೆ ಕಂಗಲಾಗುವಂತೆ ಆಗಬಾರದು'' ಎಂದು ಹೇಳಿದ ಅವರು, ''ಐತಿಹಾಸಿಕ ಯೋಜನೆ ಕಿಸಾನ್ ಸಮ್ಮಾನ್ ಮೂಲಕ 50 ಲಕ್ಷ ರೈತರಿಗೆ ತಲಾ 4 ಸಾವಿರದಂತೆ ನೆರವು ನೀಡಿದ್ದು ನೇಕಾರರಿಗೆ ತಲಾ 2 ಸಾವಿರ ರೂ. ನೀಡಲಾಗಿದೆ'' ಎಂದು ಹೇಳಿದರು.
''ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ರೈತರ ಬೆಳೆಗೆ ಮಾರಾಟ ಸ್ವಾತಂತ್ಯ್ರ ನೀಡಿದೆ. ಹಿಸ ಕೈಗಾರಿಕಾ ನೀತಿ, ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿಯಿಂದ ಕೈಗಾರಿಕೆಗೆ ಉತ್ತೇಜನ ದೊರೆಯಲಿದೆ'' ಎಂದರು.