ಶಿಮ್ಲಾ, ಜು 27 (DaijiworldNews/PY): ತಮ್ಮ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು ಎಂದು ಆನ್ಲೈನ್ ಶಿಕ್ಷಣಕ್ಕಾಗಿ ಹಸು ಮಾರಿರುವ ಸುದ್ದಿ ವೈರಲ್ ಆಗಿದ್ದು, ಇದೀಗ ಈ ಸುದ್ದಿ ಸುಳ್ಳು ಎನ್ನಲಾಗಿದೆ.
ತನ್ನ ಮಕ್ಕಳು ಆನ್ಲೈನ್ ಕ್ಲಾಸ್ನಿಂದ ವಂಚಿತರಾಗಬಾರದು. ಹಾಗಾಗಿ ಜೀವನಾಧಾರವಾಗಿದ್ದ ಹಸುವನ್ನು ಮಾರಾಟ ಮಾಡಿ, ಕೇವಲ ಆರು ಸಾವಿರ ರೂಪಾಯಿಗೆ ಮೊಬೈಲ್ ಫೋನ್ ತರಿಸಿಕೊಟ್ಟಿದ್ದಾರೆ ಎಂದು ವರದಿಯಾಗಿತ್ತು.
ಈ ಬಗ್ಗೆ ವರದಿಯನ್ನು ನೋಡಿ ಈ ದಂಪತಿಗೆ ರಾಜಕೀಯ ಮುಖಂಡರು ಮಾತ್ರವಲ್ಲದೇ ಬಾಲಿವುಡ್ ನಟ ಸೋನು ಸೂದ್ ನೆರವಿಗೆ ಮುಂದಾಗಿದ್ದರು.
ಆದರೆ, ಈ ದಂಪತಿ ಮನೆಗೆ ಅಧಿಕಾರಿಗಳು ಹೋಗಿ ನೋಡಿದ ಸಂದರ್ಭ ವಸ್ತುಸ್ಥಿತಿಯೇ ಬೇರೆಯಾಗಿದ್ದು, ಈಗಾಗಲೇ ಕುಲ್ದೀಪ್ ಅವರ ಕೊಟ್ಟಿಗೆಯಲ್ಲಿ 7 ಹಸುಗಳಿದ್ದು, ಕೊಟ್ಟಿಗೆ ತುಂಬಿ ಹೋಗಿತ್ತು. ಈ ಕಾರಣದಿಂದ ಜು10ರಂದು ಒಂದು ಹಸುವನ್ನು ಕುಲ್ದೀಪ್ ಪರಿಚಯಸ್ಥನಿಗೆ ಮಾರಾಟ ಮಾಡಿದ್ದಾರೆ. ಆದರೆ, ಹಸು ಮಾರಾಟ ಮಾಡುವ ಮೂರು ತಿಂಗಳ ಹಿಂದೆ, ಆನ್ಲೈನ್ ಶಿಕ್ಷಣಕ್ಕಾಗಿ ಮಗಳಿಗೆ ಮೊಬೈಲ್ ಫೋನ್ ಕೊಡಿಸಿದ್ದಾರೆ. ಅಲ್ಲದೇ, ಸರ್ಕಾರಿ ಶಾಲೆಯ ಬದಲು ಖಾಸಗಿ ಶಾಲೆಗೆ ಸೇರಿಸಿದ್ದಾರೆ.
ಈ ವರದಿಯೆಲ್ಲಾ ಸುಳ್ಳು. ಯಾವ ನೆರವೂ ನನಗೆ ಬೇಡ. ನನ್ನೊಂದಿಗೆ ಸಾಕಷ್ಟು ಹಸುಗಳಿವೆ ಎಂದಿದ್ದಾರೆ. ನೀವು ಮಾರಾಟ ಮಾಡಿರುವ ಹಸುವನ್ನು ನಿಮಗೆ ವಾಪಾಸ್ಸು ಕೊಡಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದಾಗ, ಕೊಟ್ಟಿಗೆ ಸಾಕಷ್ಟು ಹಸುಗಳಿವೆ. ಅದನ್ನು ಸಾಕಲು ಜಾಗವಿಲ್ಲ. ಹಾಗಾಗಿ ಅದನ್ನು ಸ್ವ ಇಚ್ಛೆಯಿಂದ ಮಾರಾಟ ಮಾಡಿದ್ದೇನೆ ಎಂದಿದ್ದಾರೆ.