ಕಾನ್ಪುರ, ಜು 27 (DaijiworldNews/PY): ಮಾಸ್ಕ್ ಧರಿಸದೆ ಮೇಕೆ ತಿರುಗಾಡುತ್ತಿದೆ ಎಂದು ಕಾನ್ಪುರ ಪೊಲೀಸರು ಬಂಧಿಸಿದ ವಿಚಿತ್ರ ಘಟನೆ ನಡೆದಿದೆ.
ಶನಿವಾರ ಈ ಘಟನೆ ನಡೆದಿದ್ದು, ಬೆಂಕೊಗಂಜ್ ಪೊಲೀಸರು ಮೇಕೆಯನ್ನು ಜೀಪ್ನಲ್ಲಿ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.
ಪೊಲೀಸರು ಮೇಕೆಯನ್ನು ಠಾಣೆಗೆ ಕೊಂಡೊಯ್ದ ಮಾಹಿತಿ ತಿಳಿದ ಮೇಕೆಯ ಮಾಲೀಕ ಪೊಲೀಸ್ ಠಾಣೆ ಧಾವಿಸಿದ್ದು, ಮೇಕೆಯನ್ನು ನೀಡುವಂತೆ ಪೊಲೀಸರೊಂದಿಗೆ ಮನವಿ ಮಾಡಿಕೊಂಡಿದ್ದಾನೆ. ಕೊನೆಗೆ ಪೊಲೀಸರು ಮೇಕೆಯನ್ನು ಆತನಿಗೆ ಹಿಂತಿರುಗಿಸಿದ್ದು, ಪ್ರಾಣಿಗಳನ್ನು ರಸ್ತೆಯಲ್ಲಿ ಅಲೆದಾಡಲು ಬಿಡಬೇಡಿ ಎಂದು ಎಚ್ಚರಿಸಿದ್ದಾರೆ.
ವ್ಯಕ್ತಿಯೋರ್ವ ಮಾಸ್ಕ್ ಧರಿಸದೇ ಮೇಕೆಯನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ. ಈ ವೇಳೆ ಆತ ಪೊಲೀಸರನ್ನು ನೋಡಿ ಮೇಕೆಯನ್ನು ಬಿಟ್ಟು ಓಡಿ ಹೋಗಿದ್ದಾನೆ. ಹಾಗಾಗಿ ಮೇಕೆಯನ್ನು ಠಾಣೆಗೆ ಕರೆದೊಯ್ದಿದ್ದು, ಬಳಿಕ ನಾವು ಮೇಕೆಯನ್ನು ಮಾಲೀಕರಿಗೆ ಹಸ್ತಾಂತರಿಸಿದ್ದೇವೆ ಎಂದು ಅನ್ವರ್ಗಂಜ್ ಪೊಲೀಸ್ ಠಾಣೆಯ ವೃತ್ತನಿರೀಕ್ಷಕ ಸೈಫುದ್ದೀನ್ ಬೇಗ್ ಅವರು ಹೇಳಿದ್ದಾರೆ.
ಪೊಲೀಸರೊಬ್ಬರಿಗೆ ಲಾಕ್ಡೌನ್ ಉಲ್ಲಂಘನೆ ಕಂಡುಬಂದಿದ್ದು, ಹಾಗಾಗಿ ಮಾಸ್ಕ್ ಧರಿಸದ ಮೇಕೆಯನ್ನು ಠಾಣೆಗೆ ಕರೆತಂದಿದ್ದಾರೆ.. ಜನರು ಈಗ ತಮ್ಮ ನಾಯಿಗಳಿಗೆ ಮಾಸ್ಕ್ ಧರಿಸುತ್ತಿದ್ದಾರೆ. ಆದರೆ ಮೇಕೆಗೆ ಯಾಕೆ ಮಾಸ್ಕ್ ಹಾಕುವುದಿಲ್ಲ ಎಂದು ಕೇಳಿದರು.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರು ತಮ್ಮ ಮಾತಿನ ವರಸೆ ಬಲಾಯಿಸಿದ್ದಾರೆ.