ಬೆಂಗಳೂರು, ಜು 27 (DaijiworldNews/PY): ಪಿಂಚಣಿ ಹಣಕ್ಕಾಗಿ ಕಳೆದ 5 ತಿಂಗಳಿಂದ ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ಫಲಾನುಭವಿಗಳನ್ನು ಅಲೆದಾಡಿಸಲಾಗುತ್ತಿದೆ. ಇದು ನಾಚಿಕೆಗೇಡು. ಈ ಸರ್ಕಾರಕ್ಕೆ ಕಣ್ಣು ಮತ್ತು ಕಿವಿಗಳು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಐದಾರು ತಿಂಗಳಿನಿಂದ ಪಿಂಚಣಿ ಹಣ ಪಾವತಿಯಾಗದೇ ಅಂಗವಿಕಲರು, ವೃದ್ಧರು ಹಾಗೂ ವಿಧವೆಯರು ಪರಿತಪಿಸುತ್ತಿದ್ದಾರೆ. ಅಂಗವಿಕಲ, ವೃದ್ಧಾಪ್ಯ ಮತ್ತು ವಿಧವಾ ವೇತನವನ್ನು ತಕ್ಷಣ ಬಿಡುಗಡೆ ಮಾಡಲು ಸರ್ಕಾರ ತುರ್ತು ಆದೇಶ ನೀಡಬೇಕು ಎಂದು ಹೇಳಿದ್ದಾರೆ.
ಕೊರೋನಾ ಸಂಕಷ್ಟದ ಸಮಯದಲ್ಲಿ ಸಕಾಲಕ್ಕೆ ಪಿಂಚಣಿ ಕೈಗೆ ಸಿಗದೇ ಅಗತ್ಯ ಔಷಧಗಳನ್ನು ಕೊಳ್ಳಲೂ ಈ ಫಲಾನುಭವಿಗಳು ಪರದಾಡುತ್ತಿದ್ದಾರೆ. ಹಲವು ಮಂದಿಗೆ ಊಟಕ್ಕೂ ತತ್ವಾರವಾಗಿದೆ. ವರ್ಷಾಚರಣೆಯ ಸಂಭ್ರಮದಲ್ಲಿರುವ ಬಿಜೆಪಿ ಸರ್ಕಾರ ಮೊದಲು ಹಣ ಬಿಡುಗಡೆಗೆ ಆದೇಶ ಮಾಡುವಂತೆ ಆಗ್ರಹಿಸುತ್ತೇನೆ ಎಂದಿದ್ದಾರೆ.
ಪಿಂಚಣಿ ಹಣಕ್ಕಾಗಿ ಕಳೆದ 5 ತಿಂಗಳಿಂದ ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ಫಲಾನುಭವಿಗಳನ್ನು ಅಲೆದಾಡಿಸಲಾಗುತ್ತಿದೆ. ಇದು ನಾಚಿಕೆಗೇಡು. ಈ ಸರ್ಕಾರಕ್ಕೆ ಕಣ್ಣು ಮತ್ತು ಕಿವಿಗಳು ಇಲ್ಲ ಎಂದು ಹೇಳಿದ್ದಾರೆ.
ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ ಎಂಬ ಬೀಜ ಮಂತ್ರ ಪಠಿಸುತ್ತಿರುವ ಬಿಜೆಪಿ ಸರ್ಕಾರದ ಬಡವರ ವಿರೋಧಿ ನೀತಿಗೆ ಇದಕ್ಕಿಂತ ಉದಾಹರಣೆ ಬೇಕೆ? ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಎಂದು ಕೇಳಿದ್ದಾರೆ.