ಎರ್ಣಾಕುಳಂ, ಜು 27 (DaijiworldNews/PY): ಕೇರಳದ ವಿನಾಯಕ್ ಎಂ ಮಳ್ಳಿಲ್ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಟಾಪರ್ ಆಗಿದ್ದು, ಪ್ರಧಾನಿ ಮೋದಿ ಅವರು ಭಾನುವಾರ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ವಿನಾಯಕ್ ಬಡಕುಟುಂಬಕ್ಕೆ ಸೇರಿದ್ದು, ಈತನ ತಂದೆ ದಿನಗೂಲಿ ಕಾರ್ಮಿಕರಾಗಿದ್ದಾರೆ. ವಿನಾಯಕ್ ಜವಾಹರ್ ನವೋದಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾನೆ.
ಭಾನುವಾರ ನಡೆದ ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ವೇಳೆ ವಿನಾಯಕ್ ಜೊತೆ ಪ್ರಧಾನಿ ಮೋದಿ ಅವರ ಸಂಭಾಷಣೆಯು ಪ್ರಸಾರವಾಗಿದೆ.
ನನಗೆ ಪ್ರಧಾನಿ ಅವರೇ ಕರೆ ಮಾಡಿದ್ದಾರೆ ಎಂದು ತಿಳಿದಾಗ ನನಗೆ ಅದುವೇ ಆನಂದದ ಕ್ಷಣವಾಗಿತ್ತು ಎಂದು ವಿನಾಯಕ್ ಹೇಳಿದ್ದಾನೆ.
ವಿನಾಯಕ್ ಬಳಿ ಪ್ರಧಾನಿ ಮೋದಿ ಅವರು ಎಷ್ಟು ರಾಜ್ಯಗಳಿಗೆ ಭೇಟಿ ನೀಡಿದ್ದೀಯಾ ಎಂದು ಕೇಳಿದಾಗ ಆತ ಕೇರಳ ಹಾಗೂ ತಮಿಳುನಾಡು ಎಂದು ಹೇಳಿದ್ದಾನೆ. ಬಳಿಕ ದೆಹಲಿಗೆ ಬರುವಂತೆ ಪ್ರಧಾನಿ ಮೋದಿ ಅವರು ಕೇಳಿದಾಗ ಉನ್ನತ ಶಿಕ್ಷಣಕ್ಕಾಗಿ ದೆಹಲಿ ವಿವಿಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾನೆ.
ನಂತರ ಭವಿಷ್ಯದಲ್ಲಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವಂತ ಇತರ ವಿದ್ಯಾರ್ಥಿಗಳಿಗೆ ಯಾವ ಸಂದೇಶ ನೀಡುತ್ತೀಯಾ ಎಂದು ಪ್ರಧಾನಿ ಕೇಳಿದ್ದು, ಶ್ರಮಪಟ್ಟು ಕಲಿಯುವುದು ಹಾಗೂ ಸಮಯ ಸದುಪಯೋಗ ತುಂಬಾ ಮುಖ್ಯ ಎಂದು ವಿನಾಯಕ್ ಉತ್ತರಿಸಿದ್ದಾನೆ.
ವಿನಾಯಕ್ ವಾಣಿಜ್ಯ ವಿಭಾಗದಲ್ಲಿ 493 ಅಂಕ ಗಳಿಸಿದ್ದಾನೆ.