ಜಮ್ಮು, ಜು. 28 (DaijiworldNews/MB) : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ತಕ್ಕ ಉತ್ತರ ನೀಡಿದ ಭಾರತ ಸೇನೆ ಓರ್ವ ಪಾಕ್ ಯೋಧನನ್ನು ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಹಳ್ಳಿಗಳನ್ನು ಗುರಿಯಾಗಿಸಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿಯನ್ನು ಪಾಕ್ ಸೇನೆ ನಡೆಸಿದ್ದು ಈ ಸಂದರ್ಭದಲ್ಲಿ ಭಾರತ ನೀಡಿದ ಪ್ರತ್ಯುತ್ತರಕ್ಕೆ ಓರ್ವ ಪಾಕ್ ಯೋಧ ಸಾವನ್ನಪ್ಪಿದರೆ, ಎಂಟು ಯೋಧರಿಗೆ ಗಾಯಗಳಾಗಿವೆ.
ಪಾಕ್ ಗಡಿನಿಯಂತ್ರಣಾ ರೇಖೆಯಲ್ಲಿ ಹಾಜಿಪಿರ್, ಪೂಂಚ್, ಛಾಂಬ್ ಮತ್ತು ರಾಖ್ ಚಿಕ್ರಿ ಸೆಕ್ಟರ್ಗಳಲ್ಲಿ ಕದನ ವಿರಾಮ ಉಲ್ಲಂಘಿಸಿದ್ದು ಭೀಂಬರ್ ಪ್ರದೇಶದಲ್ಲಿ ಪಾಕಿಸ್ತಾನ ಸೈನಿಕ ಸಾವನ್ನಪ್ಪಿದ್ದರೆ, ಹಾಜಿಪಿರ್, ರಾಖ್ ಚಿಕ್ರಿ ಮತ್ತು ಪಾದಾರ್ ಪ್ರದೇಶಗಳಲ್ಲಿ ತಲಾ ಒಬ್ಬರು ಹಾಗೂ ಪೂಂಚ್ ವಲಯದಲ್ಲಿ ಐದು ಪಾಕ್ ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.