ನವದೆಹಲಿ, ಜು. 28 (DaijiworldNews/MB) : ಹರಿಯಾಣದ ಪಲ್ವಾಲ್ನ 28 ವರ್ಷದ ಯುವಕ ಸುಮಾರು 20 ಸೆಂ.ಮೀ ಉದ್ದದ ಚಾಕುವನ್ನು ನುಂಗಿದ್ದು ತಿನ್ನಬೇಕೆನಿಸಿತು ಅದಕ್ಕೆ ತಿಂದೆ ಎಂದು ಹೇಳಿಕೊಂಡಿದ್ದಾನೆ.
ಈ ಯುವಕ ಒಂದು ತಿಂಗಳ ಹಿಂದೆ ನುಂಗಿದ ಚಾಕು ಯಕೃತ್ನಲ್ಲಿ ಪತ್ತೆಯಾಗಿದ್ದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ( ಏಮ್ಸ್) ಆಸ್ಪತ್ರೆ ವೈದ್ಯರ ತಂಡ ಸತತ ಮೂರು ಗಂಟೆ ಕಾಲ ಯಕೃತ್ ಶಸ್ತ್ರಚಿಕಿತ್ಸೆ ನಡೆಸಿ ಚಾಕುವನ್ನು ಹೊರತೆಗೆದಿದ್ದಾರೆ.
ಚಾಕು ನುಂಗಿದ ಈ ಭೂಪ ಶಸ್ತ್ರ ಚಿಕಿತ್ಸೆಯ ಬಳಿಕ ವೈದ್ಯರೊಂದಿಗೆ ಮಾತನಾಡಿದ್ದು, ಕೊರೊನಾ ಲಾಕ್ಡೌನ್ ಇದ್ದ ಸಂದರ್ಭದಲ್ಲಿ ಅಡುಗೆ ಕೋಣೆಯಲ್ಲಿ ನಾನು ಇದ್ದಾಗ ಚಾಕು ತಿನ್ನಬೇಕು ಎನಿಸಿತು. ಮೊದಲು ಅಗಿದು ತಿನ್ನಲು ಪ್ರಯತ್ನ ಮಾಡಿದೆ. ಆದರೆ ಅದು ಆಗಲಿಲ್ಲ. ಅದಕ್ಕೆ ನೀರಿನೊಂದಿಗೆ ನುಂಗಿಬಿಟ್ಟೆ ಎಂದು ಹೇಳುವ ಮೂಲಕ ವೈದ್ಯರನ್ನು ಚಕಿತರನ್ನಾಗಿಸಿದ್ದಾನೆ.
ಇನ್ನು ಈತನಿಗೆ ಸುಮಾರು ಒಂದು ತಿಂಗಳಿನಿಂದ ಯಾವುದೇ ಸಮಸ್ಯೆ ಉಂಟಾಗಿರದೆ ಬಳಿಕ ಊಟ ಮಾಡಲು ಸಾಧ್ಯವಾಗದೆ ತೂಕ ಕಡಿಮೆಯಾಗಲು ಆರಂಭವಾಗಿದೆ. ಬಳಿಕ ಹೊಟ್ಟೆ ನೋವು ಜ್ವರ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಿ ಎಕ್ಸ್ರೇ ತೆಗಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ.
ದಿನಗೂಲಿ ಕೆಲಸ ಮಾಡುತ್ತಿದ್ದ ಈತನಿಗೆ ಗಾಂಜಾ ಸೇವನೆಯ ಅಭ್ಯಾಸವಿದ್ದು ಚಾಕು ನುಂಗಿದ್ದಾನೆ. ಆದರೆ ಅಷ್ಟೊಂದು ಹರಿತವಾಗಿರುವ ಚಾಕು ನುಂಗಿದರೂ ಕೂಡಾ ಆತನ ಶಾಸ್ವನಾಳ, ಶ್ವಾಸಕೋಶ, ಹೃದಯ ಮತ್ತು ಇತರ ಅಂಗಗಳಿಗೆ ಯಾವುದೇ ಹಾನಿಯಾಗದಿರುವುದು ಆಶ್ಚರ್ಯ ಉಂಟು ಮಾಡಿದೆ. ಅಷ್ಟಕ್ಕೂ ಯಾವುದೇ ಹಾನಿಯಾಗದಂತೆ ಈತ ಈ ಹರಿತವಾದ ಚಾಕುವನ್ನು ನುಂಗಿದ್ದು ಹೇಗೆ ಎಂಬುದು ಪ್ರಶ್ನೆಯಾಗಿದೆ ಎಂದು ಹೇಳುತ್ತಾರೆ ವೈದ್ಯರು.
ಈ ಬಗ್ಗೆ ಮಾಹಿತಿ ನೀಡಿರುವ ಏಮ್ಸ್ ಆಸ್ಪತ್ರೆಯ ಜಠರ–ಕರುಳು ಶಸ್ತ್ರಚಿಕಿತ್ಸೆ ಮತ್ತು ಯಕೃತ್ತು ಕಸಿ ವಿಭಾಗದ ಪ್ರಾಧ್ಯಾಪಕ ಡಾ. ನಿಹಾರ್ ರಂಜನ್ ಡ್ಯಾಶ್, ಚಾಕು ನುಂಗಿದಾಗ ಬಾಯಿಯಿಂದ ಯಕೃತ್ವರೆಗೆ ಸಾಗುತ್ತ ಅನ್ನನಾಳವನ್ನು ಬಹಳ ಸುಲಭವಾಗಿ ಹರಿಯ ಬಹುದಾಗಿತ್ತು. ಹೃದಯ, ಶ್ವಾಸನಾಳಗಳಿಗೂ ಹಾನಿ ಉಂಟು ಮಾಡಬುಹುದಿತ್ತು ಆದರೆ ಯಾವುದೇ ಹಾನಿ ಉಂಟಾಗಿಲ್ಲ. ನಾವು ಇಷ್ಟು ದೊಡ್ಡದಾದ ಚಾಕುವನ್ನು ನುಂಗಿರುವ ಬಗ್ಗೆ ಅಧ್ಯಯನ ಮಾಡಿದೆವು. ಆದರೆ ಆ ಮಾಹಿತಿ ಎಲ್ಲೂ ದೊರೆತಿಲ್ಲ. ಸಣ್ಣ ಸೂಜಿ ಅಥವಾ ಮೀನಿನ ಮುಳ್ಳುಗಳು ಹೊಟ್ಟೆಯೊಳಗೆ ಸೇರಿರುವುದು ಇದೆ. ಆದರೆ ಇದು ಆಶ್ಚರ್ಯಧಾಯಕ ಘಟನೆಯಾಗಿದ್ದು ಈ ಅಧ್ಯಯನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ವ್ಯಕ್ತಿಯ ದೇಹದಲ್ಲಿ ಆಗಾಗಲೇ ನಂಜಾಗಿ ರಕ್ತಹೀನತೆಯೂ ಕೂಡಾ ಉಂಟಾಗಿದ್ದರಿಂದ ದೀರ್ಘಕಾಲ ಅರವಳಿಕೆ ನೀಡಿ ಶಸ್ತ್ರಚಿಕಿತ್ಸೆ ನಡೆಸುವುದು ತೀರಾ ಅಪಾಯಕಾರಿಯಾಗಿತ್ತು. ಆದರೆ ಸತತ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು ಯಶಸ್ವಿಯಾಗಿದೆ. ಏಳು ದಿನ ರೋಗಿಯನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಈಗ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.