ಅಯೋಧ್ಯೆ, ಜು. 28 (DaijiworldNews/MB) : ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ನಡೆಯಲಿರುವ ಐತಿಹಾಸಿಕ ರಾಮ ಮಂದಿರ ಭೂಮಿ ಪೂಜೆ ನಡೆಯಲಿದ್ದು ಈ ಭೂಮಿಪೂಜೆಗಾಗಿ ಮುಸ್ಲಿಂ ವ್ಯಕ್ತಿಯೊಬ್ಬರು ಸುಮಾರು 800 ಕಿ. ಮೀ. ದೂರದಿಂದ ಪ್ರಯಾಣ ಬೆಳೆಸಿದ್ದು ಈ ರಾಮ ಜನ್ಮಭೂಮಿ ಕೋಮು ಸೌಹಾರ್ದದ ತಾಣವಾಗಿ ಹೊರಹೊಮ್ಮಿದೆ.
ಅಯೋಧ್ಯೆಯಲ್ಲಿನ ಮಸೀದಿಗಳು ರಾಮಮಂದಿರ ಭೂಮಿಪೂಜೆ ಸಮೀಪಿಸುತ್ತಿದ್ದಂತೆ ಅಯೋಧ್ಯೆ ಕೋಮು ಸೌರ್ಹಾದತೆಯ ನೆಲೆಯಾಗುತ್ತಿದೆ. ಶ್ರೀರಾಮನ ತಾಯಿ ಕೌಸಲ್ಯೆಯ ಹುಟ್ಟೂರೆಂದು ಕರೆಯಲಾಗುವ ಛತ್ತೀಸ್ಗಢದ ಚಾಂದ್ಖರಿಯಿಂದ ಮೊಹ್ಮದ್ ಫೈಝ್ ಖಾನ್ ಅಯೋಧ್ಯೆ ಭೂಮಿ ಪೂಜೆಗಾಗಿ ತೆರಳಿದ್ದು ಪವಿತ್ರ ಮೃತ್ತಿಕೆಯನ್ನು ಕೂಡಾ ಹೊತ್ತು ತರುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ''ನನ್ನ ಹೆಸರು ಹಾಗೂ ಧರ್ಮದಿಂದಾಗಿ ನಾನು ಇಸ್ಲಾಂನತೆ ಇದ್ದರೂ ಕೂಡಾ ನಾನು ರಾಮ ಭಕ್ತ. ನನ್ನ ಪೂರ್ವಜರು ಹಿಂದೂಗಳಾಗಿದ್ದು ಅವರ ಹೆಸರು ರಾಮ್ಲಾಲ್ ಅಥವಾ ಶಾಮ್ಲಾಲ್ ಇರಬಹುದು ಎಂದು ನನ್ನ ಹಳ್ಳಿಯವರು ಹೇಳಿದ್ದಾರೆ. ನಾವು ಚರ್ಚಿಗೆ ಹೋದರೂ, ಮಸೀದಿಗೇ ಹೋದರೂ ನಮ್ಮೆಲ್ಲರ ಮೂಲ ಹಿಂದೂ'' ಎಂದು ಹೇಳಿದ್ದಾರೆ.
ಇನ್ನು ಅಯೋಧ್ಯೆಯ ರಾಮ್ ಕೋಟ್ ವಾರ್ಡ್ನ ಕಾಪೋರೇಟರ್ ಆದ ಹಾಜಿ ಅಸಾದ್ ಅಹ್ಮದ್ ಅವರು ಸುದ್ದಿ ಸಂಸ್ಥೆಯೊಂದಕ್ಕೆ, ''ಇಲ್ಲಿ ಮುಸ್ಲೀಮರ ಧಾರ್ಮಿಕ ಕಾರ್ಯಗಳನ್ನು ಅನ್ಯಧರ್ಮೀಯರು ಗೌರವಿಸುತ್ತಾರೆ. ರಾಮ ಮಂದಿರದ ಸುತ್ತಲಿರುವ ಮಸೀದಿಗಳಲ್ಲಿ ಇರುವ ಕೋಮು ಸೌಹಾರ್ದತೆ ಅಯೋಧ್ಯೆಯ ಶ್ರೇಷ್ಟತೆಗೆ ಒಂದು ಸಾಕ್ಷಿ'' ಎಂದು ಹೇಳಿದ್ದಾರೆ.